ನವದೆಹಲಿ: ಕೆಲವೊಂದು ಷರತ್ತುಗಳೊಂದಿಗೆ 5 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಹೈದ್ರಾಬಾದ್ ಮೂಲದ ಬಯೋಲಾಜಿಕಲ್ ಇ ಲಿಮಿಟೆಡ್ ತಯಾರಿಸಿರುವ ಸ್ವದೇಶಿ ಕೋವಿಡ್-19 ಲಸಿಕೆಯ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿ (ಡಿಸಿಜಿಐ) ಅನುಮತಿ ನೀಡಿದೆ ಎಂದು ಮೂಲಗಳು ಹೇಳಿವೆ.
ಅನುಮೋದಿತ ಶಿಷ್ಟಾಚಾರದ ಪ್ರಕಾರ ದೇಶದ ಹತ್ತು ಕಡೆಗಳಲ್ಲಿ ಎರಡು ಹಾಗೂ ಮೂರನೇ ಹಂತದ ಪ್ರಯೋಗಗಳು ನಡೆಯಲಿದ್ದು, ಕೋವಿಡ್-19 ಕುರಿತ ವಿಷಯ ತಜ್ಞರ ಸಮಿತಿ ಶಿಫಾರಸ್ಸಿನ ಆಧಾರದ ಮೇಲೆ ಡಿಸಿಜಿಐ ಅನುಮತಿ ನೀಡಿದೆ.
ಈ ಮಧ್ಯೆ 2 ರಿಂದ 18 ವರ್ಷದೊಳಗಿನವರಿಗಾಗಿ ಭಾರತ್ ಬಯೋಟೆಕ್ ತಯಾರಿಸಿರುವ ಕೋವಾಕ್ಸಿನ್ ಲಸಿಕೆಯ ಎರಡು ಹಾಗೂ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದೆ. ಕೆಲವೊಂದು ಷರತ್ತುಗಳೊಂದಿಗೆ 2 ರಿಂದ 17 ವರ್ಷದ ಮಕ್ಕಳ ಮೇಲೆ ಕೋವೊವ್ಯಾಕ್ಸ್ ನ ಎರಡು ಹಾಗೂ ಮೂರನೇ ಹಂತದ ಪ್ರಯೋಗ ನಡೆಸಲು ಸೆರಂ ಇನ್ಸಿಟಿಟ್ಯೂಟ್ ಗೆ ಭಾರತೀಯ ಔಷಧ ನಿಯಂತ್ರಕ ಮಂಡಳಿ ಅನುಮತಿ ನೀಡಿದೆ.
ಹದಿಹರೆದವರ ಮೇಲೆ ಬಯೋಲಾಜಿಕಲ್ ಇ ಕಂಪನಿಯ ಕೊರೋನಾ ವಿರೋಧಿ ಲಸಿಕೆ ಕಾರ್ಬೆವಾಕ್ಸ್ ನ ಎರಡು ಹಾಗೂ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯುತ್ತಿರುವುದಾಗಿ ಮೂಲಗಳು ಈ ಹಿಂದೆ ಹೇಳಿದ್ದವು. ಡಿಸೆಂಬರ್ ಅಂತ್ಯದೊಳಗೆ 30 ಕೋಟಿ ಡೋಸ್ ಕಾರ್ಬೆವಾಕ್ಸ್ ನ್ನು ಕೇಂದ್ರ ಸರ್ಕಾರಕ್ಕೆ ಬಯೋಲಾಜಿಕಲ್ ಇ ಕಂಪನಿ ಪೂರೈಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಜೂನ್ ನಲ್ಲಿ ತಿಳಿಸಿತ್ತು.