ನವದೆಹಲಿ: ಕೋವಿಡ್ -19 ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಘೋಷಿಸಿದ 50 ಸಾವಿರ ರೂ. ಪರಿಹಾರ ಮೊತ್ತವು ಒಂದು ದೊಡ್ಡ ಜೋಕ್ ಆಗಿದ್ದು, ಮೃತರ ಸಂಬಂಧಿಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಗುರುವಾರ ಕಾಂಗ್ರೆಸ್ ಒತ್ತಾಯಿಸಿದೆ.
"ಕಾಂಗ್ರೆಸ್ ಪಕ್ಷವು ಕೋವಿಡ್ -19 ನಿಂದ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತದೆ. ಏಕೆಂದರೆ ಕೋವಿಡ್ ನಿಂದ ಹಲವು ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ ಮತ್ತು ಹಲವರು ನಿರುದ್ಯೋಗಿಗಳಾಗಿದ್ದಾರೆ. ಮೃತ ವ್ಯಕ್ತಿಗೆ ಕೇವಲ 50,000 ರೂ. ಪರಿಹಾರ ದೊಡ್ಡ ಜೋಕ್ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸುಪ್ರಿಯಾ ಶ್ರೀನೇತ ಅವರು ಹೇಳಿದ್ದಾರೆ.
ಕೋವಿಡ್ -19 ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಬುಧವಾರ 50,000 ರೂಪಾಯಿ ಪರಿಹಾರ ನೀಡುವುದಾಗಿ ಹೇಳಿತ್ತು.
ನ್ಯಾಯಾಲಯದ ಮಧ್ಯಸ್ಥಿಕೆಯ ನಂತರ ಸರ್ಕಾರ 50,000 ರೂಪಾಯಿ ಪರಿಹಾರ ಘೋಷಿಸಿದೆ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಕೇಂದ್ರ ಸರ್ಕಾರ ಕೊರೋನಾ ವೈರಸ್ ಸಾಂಕ್ರಾಮಿಕವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತಿಲ್ಲ. ಏಕೆಂದರೆ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದರೆ ಕಾನೂನಿನ ಪ್ರಕಾರ ಕೋವಿಡ್ ನಿಂದ ಮೃತಪಟ್ಟವರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಲು ಅವಕಾಶವಿದೆ ಎಂದು ಶ್ರೀನೇತ ಹೇಳಿದ್ದಾರೆ.