ನವದೆಹಲಿ: ದೇಶಾದ್ಯಂತ ಇಲ್ಲಿಯವರೆಗೆ ಬರೋಬ್ಬರಿ 50 ಕೋಟಿ ಜನರು ಕೊವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಬುಧವಾರ ತಿಳಿಸಿದ್ದಾರೆ.
ಈ ವಿಷಯವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಮನ್ಸುಖ್ ಮಾಂಡವಿಯಾ ಅವರು, ಈ ಸಂಬಂಧ ಮುಂಚೂಣಿಯ ಕೆಲಸಗಾರರನ್ನು ಶ್ಲಾಘಿಸಿದ್ದು, ಇದು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನದ ಸಾಧನೆ ಎಂದಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ ಅವರು, "ದೇಶದಲ್ಲಿ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಲಾಗಿದೆ. 50 ಕೋಟಿ ಜನರು ತಮ್ಮ ಮೊದಲ ಕೋವಿಡ್ -19 ಲಸಿಕೆ ಪಡೆದಿದ್ದಾರೆ" ಎಂದು ಹೇಳಿದ್ದಾರೆ.
ಕೊರೋನಾ ವಾರಿಯರ್ ಶ್ರಮವನ್ನು ನಾನು ಶ್ಲಾಘಿಸುತ್ತೇನೆ. ಈ ಮಹತ್ವದ ಸಾಧನೆ ಮಾಡಲು ನಾಗರಿಕರ ಶ್ರದ್ಧೆ ಸಹಾಯ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.
ಮಂಗಳವಾರ ದೇಶಾದ್ಯಂತ 1.33 ಕೋಟಿ ಲಸಿಕೆಗಳನ್ನು ನೀಡಲಾಗಿದೆ, ಇದು ಒಂದೇ ದಿನದಲ್ಲಿ ನೀಡಿದ ಅತಿ ಹೆಚ್ಚು ಲಸಿಕೆಯಾಗಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಜನವರಿ 16,2021 ರಿಂದ ಇಲ್ಲಿಯವರೆಗೆ 65.41 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.