ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಡೆಂಗ್ಯೂನಿಂದ ಮತ್ತೆ ಮೂವರು ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಡೆಂಗ್ಯೂನಿಂದ ಸಾವನ್ನಪ್ಪಿದವರ ಸಂಖ್ಯೆ 50 ಕ್ಕೆ ಏರಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
"ಇಲ್ಲಿಯವರೆಗೆ 50 ಜನರು ಡೆಂಗ್ಯೂನಿಂದ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಹತ್ತು ಪ್ರದೇಶಗಳು - ಒಂಬತ್ತು ಬ್ಲಾಕ್‌ಗಳು ಮತ್ತು ನಗರ್ ನಿಗಮ್ ಪ್ರದೇಶ ಡೆಂಗ್ಯೂ ಪೀಡಿತವಾಗಿವೆ" ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ದಿನೇಶ್ ಕುಮಾರ್ ಪ್ರೇಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 36 ಸಕ್ರಿಯ ಶಿಬಿರಗಳಿದ್ದು, ಜ್ವರ ಹೊಂದಿರುವವರು ಸೇರಿದಂತೆ 3,719 ಮಂದಿ ಆ ಶಿಬಿರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಹೆಚ್ಚುತ್ತಿರುವ ಸಾವಿನ ಸಂಖ್ಯೆಯ ನಡುವೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ ಅವರು ಮುಖ್ಯ ಅಭಿವೃದ್ಧಿ ಅಧಿಕಾರಿಯ(ಸಿಡಿಒ)ನ್ನು ಜಿಲ್ಲೆಯ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ರೋಗಿಗಳ ಚಿಕಿತ್ಸೆ ಮತ್ತು ಇತರ ಸೌಲಭ್ಯಗಳನ್ನು ನೋಡಿಕೊಳ್ಳುವಂತೆ ನೋಡಲ್ ಅಧಿಕಾರಿಗೆ ಸೂಚಿಸಿದ್ದಾರೆ.
ಇನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಜಿಲ್ಲಾಧಿಕಾರಿಗಳು ಗುರುವಾರ ಮೂವರು ವೈದ್ಯರನ್ನು ಅಮಾನತುಗೊಳಿಸಿದ್ದು, ರೋಗಿಗಳ ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರಿ ವೈದ್ಯರಿಗೆ ಎಚ್ಚರಿಕೆ ನೀಡಿದ್ದಾರೆ.
ಸಲಾಯಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಗಿರೀಶ್ ಶ್ರೀವಾಸ್ತವ, ಸಾರ್ವಜನಿಕ ಆರೋಗ್ಯ ತಜ್ಞ ಡಾ.ರುಚಿ ಶ್ರೀವಾಸ್ತವ ಮತ್ತು ಡಾ.ಸೌರವ್ ಅವರನ್ನು ಅಮಾನತುಗೊಳಿಸಲಾಗಿದೆ.