ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕಲ್ಪಿಸಬೇಕಾದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾನೂನು ಕಾಲೇಜುಗಳಲ್ಲಿ ಸಹ ಇದೇ ರೀತಿಯ ಮೀಸಲಾತಿಯ ಅಗತ್ಯವಿದೆ ಎಂದು ಅವರು ಹೇಳಿದರು. ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಒಂಬತ್ತು ಹೊಸದಾಗಿ ನೇಮಕಗೊಂಡ ನ್ಯಾಯಮೂರ್ತಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಹಿಳಾ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ನ್ಯಾ.ಎನ್.ವಿ.ರಮಣ ಮಾತನಾಡಿದರು.
"ಮೀಸಲಾತಿ ನಿಮ್ಮ ಹಕ್ಕು. ಮೀಸಲಾತಿಗೆ ಆಗ್ರಹಿಸಲು ನೀವು ಅರ್ಹರು" ಎಂದು ಹೇಳಿದರು. "ಕೆಳ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಾಧೀಶರು ಶೇಕಡಾ 30 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಹೈಕೋರ್ಟ್‌ಗಳಲ್ಲಿ ಈ ಪ್ರಮಾಣ ಶೇ.11.5 ರಷ್ಟಿದೆ. ಸುಪ್ರೀಂ ಕೋರ್ಟ್‌ನಲ್ಲಿ ಶೇ. 11-12 ರಷ್ಟು ಮಾತ್ರ ಎಂದು ಹೇಳಿದರು. ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿಯ ಅಗತ್ಯವಿದೆ. ಇದು ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾಗಿರುವವರ ಸಮಸ್ಯೆ ಎಂದು ಹೇಳಿದರು. "ದೇಶದಲ್ಲಿ 1.7 ದಶಲಕ್ಷ ವಕೀಲರಿದ್ದರೂ ಅವರಲ್ಲಿ ಶೇ.15 ರಷ್ಟು ಮಾತ್ರ ಮಹಿಳೆಯರು. ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ಆಯ್ಕೆಯಾಗುವ ಮಹಿಳಾ ಜನಪ್ರತಿನಿಧಿಗಳು ಕೇವಲ ಶೇ.2 ರಷ್ಟು ಮಾತ್ರ. ಬಾರ್ ಕೌನ್ಸಿಲ್ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿಯಲ್ಲಿ ಮಹಿಳಾ ಪ್ರತಿನಿಧಿ ಏಕಿಲ್ಲ ಎಂಬುದು ನನ್ನ ಪ್ರಶ್ನೆಯಾಗಿದೆ ಎಂದು ಹೇಳಿದರು.
ಈ ಸಮಸ್ಯೆಗಳು ಆದಷ್ಟು ಶೀಘ್ರ ಪರಿಹಾರವಾಗಲಿದೆ ಎಂದು ನ್ಯಾ. ಎನ್ ವಿ ರಮಣ ಆಶಯ ವ್ಯಕ್ತಪಡಿಸಿದ್ದಾರೆ. ಮಹಿಳಾ ವಕೀಲರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಕೆಲಸದ ಸ್ಥಳಗಳಲ್ಲಿ ಅಹಿತಕರ ವಾತಾವರಣ. ಮಹಿಳಾ ಶೌಚಾಲಯಗಳು, ಮಕ್ಕಳ ಆರೈಕೆ ಕೇಂದ್ರಗಳ ಕುರಿತು ಚರ್ಚಿಸಿದರು. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು. ಇಂದು ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಮುಖ್ಯನ್ಯಾಯಮೂರ್ತಿ ಶುಭಾಶಯ ಕೋರಿದರು.