ಗುವಾಹಟಿ: ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆಯತ್ತ ವಿಶೇಷ ಗಮನ ಹರಿಸುತ್ತಿರುವ ಕೇಂದ್ರ ಸರ್ಕಾರ ಸೆ.04 ರಂದು ಅಸ್ಸಾಂ ನ 5 ಬಂಡುಕೋರ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ.
ಅಸ್ಸಾಂ ನ ಕರ್ಬಿ ಅಂಗ್ಲಾಂಗ್ ನ ಭಾಗದಲ್ಲಿ ಈ ಬಂಡುಕೋರ ಸಂಘಟನೆಗಳು ಸಕ್ರಿಯವಾಗಿದ್ದವು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ಸಿಎಂ ಹಿಮಂತ್ ಬಿಸ್ವ ಶರ್ಮ ಹಾಗೂ ಬಂಡುಕೋರ ಸಂಘಟನೆಗಳ ಪ್ರಮುಖ ನಾಯಕರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಸಂಘಟನೆಗಳ ನಾಯಕರು ಕಳೆದ ವರ್ಷ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುನ್ನೆಲೆಗೆ ಬಂದಿದ್ದರು.
ಶಾ ಮತ್ತು ಶರ್ಮಾ ಈ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದು ಮೋದಿ ಸರ್ಕಾರ ದಶಕಗಳಷ್ಟು ಹಳೆಯ ಬಿಕ್ಕಟ್ಟನ್ನು ಪರಿಹರಿಸಲು ಬದ್ಧವಾಗಿದೆ ಹಾಗೂ ಅಸ್ಸಾಂ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವುದಕ್ಕೆ ಬದ್ಧವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕರ್ಬಿ ಅಂಗ್ಲಾಂಗ್ ನಲ್ಲಿ ಸುಧೀರ್ಘ ಅವಧಿಯ ನಂತರ ಶಾಂತಿ ಮರಳುತ್ತಿದೆ. 2014 ರಲ್ಲಿ ಮೋದಿ ಪ್ರಧಾನಿಯಾದಾಗಿನಿಂದಲೂ ಈಶಾನ್ಯದಲ್ಲಿ ಅಭಿವೃದ್ಧಿ ಹಾಗೂ ಶಾಂತಿಗಾಗಿ ಶ್ರಮಿಸುತ್ತಿದ್ದಾರೆ. ಒಪ್ಪಂದಕ್ಕೆ ಸಹಿ ಹಾಕಿರುವ ಕರ್ಬಿ ಹಾಗೂ ಸಿಎಂಗೆ ಒಪ್ಪಂದದ ಭರವಸೆಗಳನ್ನು ಈಡೇರಿಸುವುದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.
ಶಸ್ತ್ರಾಸ್ತ್ರ ತ್ಯಜಿಸಿದ ಬಂಡುಕೋರರಿಗೆ ಪುನರ್ವಸತಿ ಹಾಗೂ ಅವರ ಮೇಲಿನ ಘೋರವಲ್ಲದ ಅಪರಾಧಗಳಿಗೆ ವಿಧಿಸಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವುದು, ರಾಜ್ಯದಲ್ಲಿ ಕರ್ಬಿ ಭಾಷೆಯನ್ನು ಸಹ ಭಾಷೆಯನ್ನಾಗಿ ಪರಿಗಣಿಸುವುದು ಸೇರಿದಂತೆ ಹಲವು ಅಂಶಗಳು ಒಪ್ಪಂದದ ಪ್ರಮುಖ ಭಾಗವಾಗಿವೆ.