ನವದೆಹಲಿ : ಆಡಳಿತಾತ್ಮಕ ಹಾಗೂ ಚಿಕಿತ್ಸಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರಕಾರದ ವೈದ್ಯರುಗಳ ನಿವೃತ್ತಿಯ ವಯಸ್ಸನ್ನು 65 ವರ್ಷಗಳಿಗೆ ಹೆಚ್ಚಿಸಲು ಮೋದಿ ಸರಕಾರ ನಿರ್ಧರಿಸಿದೆ. ಈ ವಿಷಯವಾಗಿ ಅಂತರ್ ಸಚಿವಾಂಗ ಸಮಾಲೋಚನೆಗಳನ್ನು ಪೂರ್ಣಗೊಳಿಸಲಾಗಿದ್ದು, ಇತರ ಸಚಿವಾಲಯಗಳಿಂದ ಬಂದಿರುವ ಪ್ರತಿಕ್ರಿಯೆಗಳನ್ನು ಪರಿಶೀಲಿಸುತ್ತಿದೆ.
ಕೇಂದ್ರ ಸರಕಾರಿ ವೈದ್ಯರುಗಳ ನಿವೃತ್ತಿ ವಯಸ್ಸನ್ನು 2017ರಲ್ಲಿ 60 ವರ್ಷಗಳಿಂದ 65 ವರ್ಷಗಳಿಗೆ ಹೆಚ್ಚಿಸಲಾಗಿತ್ತು. ಆದಾಗ್ಯೂ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ವರಿಷ್ಠರಂತಹ ಆಡಳಿತಾತ್ಮಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು 62ನೇ ವಯಸ್ಸಿನಲ್ಲಿ ನಿವೃತ್ತರಾಗಬೇಕಿತ್ತು ಮತ್ತು ಅವರು ವೈದ್ಯಕೀಯ ಚಿಕಿತ್ಸಕರಾಗಿ ಸರಕಾರಿ ಸೇವೆಯಲ್ಲಿ ಮುಂದುವರಿಯಬಹುದಾಗಿತ್ತು.
ಚಿಕಿತ್ಸಾ ಪರಿಣತಿಗೆ ಉತ್ತೇಜನ ನೀಡಲು ನಿವೃತ್ತಿಯ ವಯಸ್ಸನ್ನು ಹೆಚ್ಚಿಸಲಾಗಿದೆಯೆಂದು ಕೇಂದ್ರ ಸರಕಾರ ಹೇಳಿಕೊಂಡಿತ್ತು. ಆದರೆ ಕೇಂದ್ರ ಸರಕಾರದ ಆಡಳಿತಾತ್ಮಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಿಸದೆ ಇದ್ದುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕ್ಲಿನಿಕಲ್ ಹಾಗೂ ಆಡಳಿತಾತ್ಮಕ ಹುದ್ದೆಗಳೆರಡರಲ್ಲೂ ಕರ್ತವ್ಯ ನಿರ್ವಹಿಸುತ್ತಿರುವವರ ನಿವೃತ್ತಿ ವಯಸ್ಸನ್ನು 65ಕ್ಕೆ ವಿಸ್ತರಿಸಬೇಕೆಂಬ ಬೇಡಿಕೆಗಳು ಬಲವಾಗಿ ಕೇಳಿಬರತೊಡಗಿದ್ದವು.
ಹರ್ಯಾಣದಂತಹ ರಾಜ್ಯಗಳಲ್ಲಿ, ರಾಜ್ಯ ಸರಕಾರದ ಸೇವೆಯಲ್ಲಿ ನಿಯೋಜಿತರಾಗಿರುವ ವೈದ್ಯರುಗಳ ನಿವೃತ್ತಿ ವಯಸ್ಸನ್ನು ಈಗಾಗಲೇ 65ಕ್ಕೆ ಹೆಚ್ಚಿಸಲಾಗಿದೆ.