ಡೆಹ್ರಾಡೂನ್ : ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) 2021 ಸೆಪ್ಟಂಬರ್ 1ರಂದು 66ನೇ ವರ್ಷಕ್ಕೆ ಪಾದಾರ್ಪಣೆಗೈಯಲಿದೆ ಎಂದು ಎಲ್‌ಐಸಿಯ ಪತ್ರಿಕಾ ಹೇಳಿಕೆ ತಿಳಿಸಿದೆ.
ರಾಷ್ಟ್ರೀಕರಣದ ನೈಜ ಉದ್ದೇಶವನ್ನು ಕಾರ್ಯರೂಪಕ್ಕೆ ತರುತ್ತಿರುವ ಎಲ್‌ಐಸಿ ವಿಮೆ ಮಾಡಬಹುದಾದ ಎಲ್ಲ ಜನರನ್ನು ಸಮಂಜಸ ಬೆಲೆಯಲ್ಲಿ ತಲುಪಲು ಸಂದೇಶ ಪ್ರಚಾರ ಮಾಡುವುದಕ್ಕೆ ಬದ್ಧವಾಗಿದೆ ಎಂದು ಅದು ಹೇಳಿದೆ.
1956ರಲ್ಲಿ 5 ಕೋಟಿ ರೂಪಾಯಿ ಮೂಲ ಬಂಡವಾಳದಿಂದ ಆರಂಭವಾದ ಎಲ್‌ಐಸಿ ಇಂದು 34,36,686 ಕೋಟಿ ರೂ. ಜೀವ ನಿಧಿಯೊಂದಿಗೆ 38,04,610 ಕೋಟಿ ರೂ. ಮೂಲ ಆಸ್ತಿ ಹೊಂದಿದೆ. ಬ್ರಾಂಡ್ ಫೆನಾನ್ಸ್ ಇನ್ಸೂರೆನ್ಸ್ ಬಿಡುಗಡೆ ಮಾಡಿದ ವರದಿ ಪ್ರಕಾರ ಎಲ್‌ಐಸಿ ಜಗತ್ತಿನಲ್ಲೇ ಬಲಿಷ್ಠತೆಯಲ್ಲಿ 3ನೇ ಸ್ಥಾನ ಹಾಗೂ ಅತಿ ಹೆಚ್ಚು ಮೌಲ್ಯಯುತ ಬ್ರಾಂಡ್‌ನಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ.
ಎಲ್‌ಐಸಿ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡು ಎರಡು ದಶಕಗಳು ಕಳೆದ ಹೊರತಾಗಿಯೂ ಮೊದಲ ವರ್ಷದ ಪ್ರಿಮಿಯಂ ಆದಾಯದಲ್ಲಿ ಶೇ. 66.18 ಹಾಗೂ ಪಾಲಿಸಿಯ ಸಂಖ್ಯೆಯಲ್ಲಿ ಶೇ. 74.58 ಮಾರುಕಟ್ಟೆ ಪಾಲು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. 2020-21ನೇ ಹಣಕಾಸು ವರ್ಷದಲ್ಲಿ ಎಲ್‌ಐಸಿ 2.10 ಕೋಟಿ ನೂತನ ಪಾಲಿಸಿಯನ್ನು ಮಾರಾಟ ಮಾಡಿದೆ ಹಾಗೂ 2021 ಮಾರ್ಚ್ 31ರ ವರೆಗೆ 1.84 ಲಕ್ಷ ಕೋಟಿ ರೂ. ಮೊತ್ತ ಸಂಗ್ರಹಿಸುವ ಮೂಲಕ ಮೊದಲ ವರ್ಷದ ಪ್ರಿಮಿಯಂನ ಅವಧಿಯಲ್ಲಿ ಹೊಸ ವ್ಯವಹಾರದಲ್ಲಿ ಶೇ. 3.48 ಬೆಳವಣಿಗೆ ಸಾಧಿಸಿದೆ.
8 ವಲಯ ಕಚೇರಿ, 113 ವಿಭಾಗೀಯ ಕಚೇರಿ, 74 ಗ್ರಾಹಕರ ವಲಯ, 2,048 ಶಾಖಾ ಕಚೇರಿ, 1,546 ಸೆಟಲೈಟ್ ಕಚೇರಿ, 42,000ಕ್ಕೂ ಅಧಿಕ ಪ್ರಿಮಿಯಂ ಪಾಯಿಂಟ್‌ಗಳು ಹಾಗೂ ಲೈಫ್ ಪ್ಲಸ್ ಕಚೇರಿ, 1 ಲಕ್ಷಕ್ಕೂ ಅಧಿಕ ಉದ್ಯೋಗಿಗಳು, 13.53 ಲಕ್ಷ ಏಜೆಂಟರು ಹಾಗೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಭರವಸೆ ನೀಡಿದೆ.
ಇದಲ್ಲದೆ, ಉತ್ಪಾದಕತೆ ಹೆಚ್ಚಿಸಲು ಎಲ್‌ಐಸಿ 8 ಸರಕಾರಿ ಬ್ಯಾಂಕ್‌ಗಳು, 6 ಖಾಸಗಿ ಬ್ಯಾಂಕ್‌ಗಳು, 13 ಪ್ರಾದೇಶಿಕ ಬ್ಯಾಂಕ್‌ಗಳು, 41 ಕೋ-ಆಪರೇಟಿವ್ ಬ್ಯಾಂಕ್‌ಗಳು ಹಾಗೂ 1 ವಿದೇಶಿ ಬ್ಯಾಂಕ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.