ನವದೆಹಲಿ: ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈವರಗೆ ಸುಮಾರು 66.89 ಕೋಟಿ ಕೋವಿಡ್-19 ಲಸಿಕೆ ಪೂರೈಸಲಾಗಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ.
ಸುಮಾರು 1.56 ಕೋಟಿ ಡೋಸ್ ಲಸಿಕೆ ಪೈಪ್ ಲೈನ್ ನಲ್ಲಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ ಸದ್ಯ ಸುಮಾರು 4.37 ಕೋಟಿ ಡೋಸ್ ಬಳಕೆಯಾಗದ ಕೋವಿಡ್-19 ಲಸಿಕೆ ಇರುವುದಾಗಿ ಸಚಿವಾಲಯ ತಿಳಿಸಿದೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆ ಪೂರೈಕೆ ಹಾಗೂ ಲಭ್ಯತೆಯೊಂದಿಗೆ ಲಸಿಕಾ ಅಭಿಯಾನದ ವೇಗವನ್ನು ತೀವ್ರಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆರೋಗ್ಯ ಸಚಿವಾಲಯದ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 68,46,69,521 ಜನರಿಗೆ ಲಸಿಕೆಯನ್ನು ನೀಡಲಾಗಿದೆ.