ನವದೆಹಲಿ: ಅಕ್ಟೋಬರ್ 6ರ ವೇಳೆಗೆ ದೇಶದ ವಾಯವ್ಯ ಭಾಗದಲ್ಲಿ ನೈಋತ್ಯ ಮುಂಗಾರು ಅಂತ್ಯವಾಗಲು ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಭಾರತದ ಪೂರ್ವ ಹಾಗೂ ಪಶ್ಚಿಮ ಕರಾವಳಿಯಲ್ಲಿ ಗುಲಾಬ್ ಚಂಡಮಾರುತದಿಂದಾಗಿ ಭಾರೀ ಮಳೆಯಾಗುತ್ತಿದ್ದು, ಈ ಬೆನ್ನಲ್ಲೇ ಹವಾಮಾನ ಇಲಾಖೆ ಮುಂಗಾರು ಅಂತ್ಯವಾಗುವ ಮುನ್ಸೂಚನೆ ನೀಡಿದೆ.
ಗುಜರಾತ್ ಕರಾವಳಿಯ ಈಶಾನ್ಯ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪ್ರಭಾವದಲ್ಲಿ ಸೌರಾಷ್ಟ್ರ ಹಾಗೂ ಕಚ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆನಂತರ ಮಳೆ ಪ್ರಮಾಣ ಗಮನಾರ್ಹ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಾಹೀನ್ ಚಂಡಮಾರುತದ ಪರಿಣಾಮದಿಂದ ಗುಜರಾತ್, ಮಹಾರಾಷ್ಟ್ರ, ಕೊಂಕಣ, ಮರಾಠವಾಡ ಮತ್ತು ಗೋವಾ ಭಾಗದಲ್ಲಿ ವಿಪರೀತ ಮಳೆಯಾಗಲಿದೆ.
ಪಶ್ಚಿಮ ಬಂಗಾಳ, ಮರಾಠವಾಡ, ಸೌರಾಷ್ಟ್ರ, ಕಚ್, ಮಧ್ಯಪ್ರದೇಶ, ವಿದರ್ಭ, ಛತ್ತೀಸ್ಗಢ, ಜಾರ್ಖಂಡ್, ಆಂಧ್ರಪ್ರದೇಶ, ಕರ್ನಾಟಕದ ಕರಾವಳಿ ಪ್ರದೇಶ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ. ಜೊತೆಗೆ ತೆಲಂಗಾಣ, ತಮಿಳುನಾಡು, ಕೇರಳ, ಪುದುಚೆರಿ, ಮಾಹೆಯಲ್ಲಿ ಕೂಡ ಶಾಹೀನ್ ಚಂಡಮಾರುತದ ಪರಿಣಾಮದಿಂದ ಅಲ್ಲಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಅಕ್ಟೋಬರ್ 4ರವರೆಗೂ ಭಾರೀ ಮಳೆ ಸೂಚನೆಇದಲ್ಲದೇ ಉತ್ತರ ಜಾರ್ಖಂಡ್ ಹಾಗೂ ನೆರೆಯ ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ. ಸೆಪ್ಟೆಂಬರ್ 30ರಂದು ಪಶ್ಚಿಮ ಬಂಗಾಳದಲ್ಲಿ, ಅಕ್ಟೋಬರ್ 2 ರಂದು ಬಿಹಾರದಲ್ಲಿ, ಪಶ್ಚಿಮ ಬಂಗಾಳ, ಹಿಮಾಲಯ ಪ್ರದೇಶ, ಸಿಕ್ಕಿಂನಲ್ಲಿ ಅಕ್ಟೋಬರ್ 2-3ರಂದು ಮಳೆಯಾಗಲಿದೆ. ಜಾರ್ಖಂಡ್‌ನಲ್ಲಿ ಸೆಪ್ಟೆಂಬರ್ 30ರಂದು ಅಧಿಕ ಮಟ್ಟದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡು, ಕೇರಳ, ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆ
ಅಕ್ಟೋಬರ್ 1ರಿಂದ ದೇಶದ ಹಲವು ಭಾಗಗಳಲ್ಲಿ ಅಧಿಕ ಮಳೆ ಆರಂಭವಾಗಲಿದೆ. ತಮಿಳುನಾಡು, ಕೇರಳ, ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಅಕ್ಟೋಬರ್ 1ರಿಂದ 4ರವರೆಗೂ ವ್ಯಾಪಕ ಮಳೆಯಾಗಲಿದೆ. ತಮಿಳುನಾಡಿನಲ್ಲಿ ಅಕ್ಟೋಬರ್ 2ರಿಂದ 4ರವರೆಗೂ ಅಧಿಕ ಮಳೆ ದಾಖಲಾಗಲಿದೆ ಎಂದು ಸೂಚನೆ ನೀಡಿದೆ. ಅಕ್ಟೋಬರ್ 6ರ ವೇಳೆಗೆ ವಾಯವ್ಯ ರಾಜ್ಯಗಳಲ್ಲಿ ಮುಂಗಾರು ಅಂತ್ಯವಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ತಿಳಿಸಿದೆ.
ಶಾಹೀನ್ ಚಂಡಮಾರುತ ಸೃಷ್ಟಿ
ಒಡಿಶಾ, ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿದ್ದ 'ಗುಲಾಬ್' ಚಂಡಮಾರುತ ಸದ್ಯ ದುರ್ಬಲಗೊಂಡಿದೆ. ಆದರೆ ಅಪರೂಪದ ಹವಾಮಾನ ಬದಲಾವಣೆಯಲ್ಲಿ, ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಗುಲಾಬ್ ಚಂಡಮಾರುತ 'ಶಾಹೀನ್' ಚಂಡಮಾರುತವಾಗಿ ಮರುಹುಟ್ಟು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಗುಲಾಬ್ ಚಂಡಮಾರುತ ದುರ್ಬಲವಾದ ಬೆನ್ನಲ್ಲೇ ಸೆ.30ರಂದು ಅಥವಾ ಅಕ್ಟೋಬರ್ 1ರ ವೇಳೆಗೆ ದೇಶದ ಕರಾವಳಿಗೆ ಮತ್ತೊಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ. ಈ ಚಂಡಮಾರುತಕ್ಕೆ ಕತಾರ್, 'ಶಾಹೀನ್' ಎಂಬ ಹೆಸರನ್ನು ನೀಡಿದೆ.
ಗುಲಾಬ್ ಚಂಡಮಾರುತದ ಪ್ರಭಾವದಡಿಯಲ್ಲಿ ಈಶಾನ್ಯ ಅರಬ್ಬಿ ಸಮುದ್ರ ಹಾಗೂ ನೆರೆಹೊರೆಯ ಗುಜರಾತ್ ಕರಾವಳಿ ಪ್ರದೇಶದಲ್ಲಿ ಗುರುವಾರ ಸಂಜೆ ವೇಳೆಗೆ ಶಾಹೀನ್ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ. ಈಶಾನ್ಯ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಕರ್ನಾಟಕ ಕರಾವಳಿಯಲ್ಲಿ ಅ.4ರವರೆಗೂ ಮಳೆ
ರಾಜ್ಯದ ಕರಾವಳಿ ಹಾಗೂ ದಕ್ಷಿಣ ಈ ಜಿಲ್ಲೆಗಳಲ್ಲಿ ಅಕ್ಟೋಬರ್ 4ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಟೋಬರ್ 2 ರಿಂದ 4ರವರೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.