ನವದೆಹಲಿ: ಭಾರತದ ಕೋವಿಡ್ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಮೀಕ್ಷೆಯೊಂದರಲ್ಲಿ ಭಾಗವಹಿಸಿದ್ದ ಶೇಕಡಾ 72 ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಲಸಿಕೆಗಳು ವಿದೇಶಿ ಕೋವಿಡ್ ಲಸಿಕೆಗಳಿಗೆ ಸಮನಾಗಿವೆ ಎಂದು ಶೇ 60ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಲಸಿಕೆ ಕುರಿತು ಜನರ ಹಿಂಜರಿಕೆ ಪ್ರಮಾಣವನ್ನು ತಿಳಿಯುವುದಕ್ಕಾಗಿ 'ಪಬ್ಲಿಕ್' ಎಂಬ ಸೋಷಿಯಲ್ ನೆಟ್ವರ್ಕಿಂಗ್ ಗ್ರೂಪ್ 'ಪಬ್ಲಿಕ್ ಕೀ ಆವಾಜ್ ಪೋಲ್' ನಡೆಸಿತ್ತು. ಸಮೀಕ್ಷೆಯಲ್ಲಿ 9,14,164 ಮಂದಿ ಭಾಗವಹಿಸಿದ್ದರು.
ಸಮೀಕ್ಷೆಯ ಪ್ರಕಾರ, ಶೇ 8.8 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆಯಲು ಹಿಂಜರಿಕೆ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರು ಲಸಿಕೆ ಪಡೆಯುವುದು ಸುರಕ್ಷಿತ ಎಂದು ಭಾವಿಸಿದ್ದಾರೆ.
ಸಮೀಕ್ಷೆಯಲ್ಲಿ ಭಾಗವಹಿಸಿರುವ ಶೇ 25ರಷ್ಟು ಮಂದಿ ಈಗಾಗಲೇ ಎರಡೂ ಡೋಸ್ ಲಸಿಕೆ ಪಡೆದಿರುವುದಾಗಿ ತಿಳಿಸಿದ್ದಾರೆ. ಶೇ 18ರಷ್ಟು ಮಂದಿ ಇನ್ನೂ ಒಂದು ಡೋಸ್ ಲಸಿಕೆ ಕೂಡ ಪಡೆದಿಲ್ಲ ಎಂದು ತಿಳಿಸಿದ್ದರೆ ಶೇ 8.8ರಷ್ಟು ಮಂದಿ ಲಸಿಕೆ ತೆಗೆದುಕೊಳ್ಳುವುದು ಖಚಿತವಿಲ್ಲ ಎಂದು ಹೇಳಿದ್ದಾರೆ.
ಶೇ 4ರಷ್ಟು ಮಂದಿ ಲಸಿಕೆ ಮೇಲೆ ನಂಬಿಕೆ ಇಲ್ಲವೆಂದು ತಿಳಿಸಿದ್ದಾರೆ. ಲಸಿಕೆಯನ್ನು ಪಡೆಯದಿರುವುದಕ್ಕೆ ನೀಡಿದ ಕಾರಣಗಳಲ್ಲಿ ಶೇ 34ರಷ್ಟು ಲಸಿಕೆಯ ಅಡ್ಡಪರಿಣಾಮಗಳ ಕುರಿತಾಗಿಯೇ ಇದೆ. ಲಸಿಕೆ ಹಿಂಜರಿಕೆಗೆ ಶೇ 20ರಷ್ಟು ನಂಬಿಕೆ ಕೊರತೆ, ಶೇ 14ರಷ್ಟು ಆರೋಗ್ಯ ಕಾಳಜಿ ಮತ್ತು ಶೇ 11ರಷ್ಟು ಈವರೆಗೆ ಲಸಿಕೆಯೇ ತೆಗೆದುಕೊಳ್ಳದಿರುವುದು ಕಾರಣ ಎಂದು ಸಮೀಕ್ಷಾ ವರದಿ ಹೇಳಿದೆ.