ನವದೆಹಲಿ: ಪೂರ್ವ ದೆಹಲಿಯಲ್ಲಿ ವಾಸಿಸುತ್ತಿರುವ 14 ರಿಂದ 17 ವರ್ಷ ವಯಸ್ಸಿನ ಶೇ.75ರಷ್ಟು ಹದಿಹರೆಯದವರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಶಕ್ತಿ ಮತ್ತು ಸಂಪನ್ಮೂಲ ಸಂಸ್ಥೆ ಸಿದ್ಧಪಡಿಸಿದ ಅಧ್ಯಯನವು ಆರು ವಿವಿಧ ಜಿಲ್ಲೆಗಳಲ್ಲಿ ವಾಸಿಸುವ 2427 ಮಂದಿಯನ್ನು ಸಮೀಕ್ಷೆ ಮಾಡಿದೆ. ಲುಧಿಯಾನ, ಪೂರ್ವ ದೆಹಲಿ, ವಿಶಾಖಪಟ್ಟಣಂ, ಪಟಿಯಾಲ, ಪಂಚಕುಲ, ಜೈಸಲ್ಮೇರ್ ನಗರಗಳಲ್ಲಿ ದೈನಂದಿನ ಪಿಎಂ 2.5 ಸಾಂದ್ರತೆಯನ್ನು ದಾಟಿದೆ ಎಂದು ಅಧ್ಯಯನ ಹೇಳಿದೆ.
ದೆಹಲಿ ಹಾಗೂ ಪಟಿಯಾಲ ನಡುವೆ ಬಹುತೇಕ ಮಂದಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೂನ್ 2019ರಿಂದ ಮಾರ್ಚ್ 2020ರ ನಡುವೆ ಆರು ಜಿಲ್ಲೆಗಳಲ್ಲಿ 14-17 ವರ್ಷ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ಆರೋಗ್ಯ ಸಮೀಕ್ಷೆಯನ್ನು ನಡೆಸಲಾಯಿತು.
ವಿಶ್ಲೇಷಣೆ ಸಂದರ್ಭದಲ್ಲಿ ಉಸಿರಾಟ ಸಂಬಂಧಿತ ಹೆಚ್ಚು ದೂರುಗಳು ಕೇಳಿಬಂದಿದ್ದವು. ಸೀನು ಹಾಗೂ ಶೀತದ ಕುರಿತ ದೂರುಗಳು ಲೂಧಿಯಾನದಿಂದ ಬಂದಿತ್ತು. ಗಾಳಿಯಲ್ಲಿ ಕಲುಷಿತ ಮಟ್ಟ ಹೆಚ್ಚಾಗಿರುವುದೇ ಉಸಿರಾಟ ತೊಂದರೆಗೆ ಕಾರಣವಾಗಿದೆ ಎಂದು ಅಧ್ಯಯನ ಹೇಳಿದೆ.
ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣವು ದಿನೇ ದಿನೇ ಹೆಚ್ಚಾಗುತ್ತಿದ್ದು, ನವೆಂಬರ್ 2019ಕ್ಕೆ ಹೋಲಿಸಿದರೆ ಈ ವರ್ಷ ವಾಯುಮಾಲಿನ್ಯ ಉಲ್ಬಣಗೊಂಡಿರುವುದು ಢಾಳಾಗಿ ಕಾಣಸಿಗುತ್ತದೆ.
ಇದು ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯಗಳ ಸುಡುವಿಕೆಯಿಂದ ಉಂಟಾಗುವ ಹೊಗೆಯಿಂದ ಉಂಟಾಗಿದ್ದು, ಆರೋಗ್ಯಕರ ಗಾಳಿಯನ್ನು ಹಾಳು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ದೆಹಲಿಯಲ್ಲಿ ವಾಯುಮಾಲಿನ್ಯ ಗುಣಮಟ್ಟ ಹೆಚ್ಚಾಗಿದ್ದು, ಇದಕ್ಕೆ ಮೂಲ ಕಾರಣ ಈ ವರ್ಷ ಶೇಕಡಾ 42ರಷ್ಟು ತ್ಯಾಜ್ಯ ಸುಡುವಿಕೆಯಿಂದ ಉಂಟಾದ ಮಾಲಿನ್ಯ ಎಂದು ಪರಿಗಣಿಸಲಾಗಿದೆ.
ಇನ್ನು ಇದು ಕೊವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಂದರ್ಭವಾಗಿರುವುದರಿಂದ ವಾಯುಮಾಲಿನ್ಯದ ಜೊತೆಗೆ ಸುತ್ತಿಕೊಂಡ ಉಸಿರಾಟ ಸಂಬಂಧಿತ ಕಾಯಿಲೆಗಳು ನೇರವಾಗಿ ಕೊರೊನಾದ ಹೆಚ್ಚಳಕ್ಕೆ ನಾಂದಿ ಹಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಜನರು ಆದಷ್ಟು ಹೊರಾಂಗಣ ಚಟುವಟಿಕೆಗಳನ್ನು ಕಡಿಮೆಗೊಳಿಸಲು, ಮುಂಜಾನೆಯ ನಡಿಗೆಯನ್ನು ನಿಲ್ಲಿಸುವುದರ ಜೊತೆಗೆ ಕೊಠಡಿ ಬಾಗಿಲುಗಳನ್ನು ಮುಚ್ಚುವಂತೆ ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ.
ತೀವ್ರವಾದ ಗಾಳಿಯ ಗುಣಮಟ್ಟವು ಆರೋಗ್ಯವಂತ ಜನರಿಗೆ ಉಸಿರಾಟದ ತೊಂದರೆ ಮತ್ತು ಶ್ವಾಸಕೋಶ ಅಥವಾ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಗಂಭೀರವಾದ ಪರಿಣಾಮವನ್ನು ಉಂಟುಮಾಡಲಿದ್ದು, ಎದೆನೋವು, ಕೆಮ್ಮು, ಉಬ್ಬಸ ಇತ್ಯಾದಿ ಸಮಸ್ಯೆಗಳು ಬಂದರೆ ವೈದ್ಯರನ್ನು ಸಂಪರ್ಕಿಸಿ ಎಂಬ ಸಲಹೆ ನೀಡಲಾಗಿದೆ.