ನವದೆಹಲಿ: ಉತ್ತರ ದೆಹಲಿಯ ಜನದಟ್ಟಣೆಯಿಂದ ಕೂಡಿರುವ ಸಬ್ಜಿ ಮಂಡಿ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಸೋಮವಾರ ಕುಸಿದಿದ್ದು, ತಮ್ಮ ತಾಯಿಯೊಂದಿಗೆ ಅಲ್ಲೇ ಹಾದುಹೋಗುತ್ತಿದ್ದ ಹಾದುಹೋಗುತ್ತಿದ್ದ ಅಣ್ಣ-ತಮ್ಮ ಅವಶೇಷಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟಿರುವ ಇಬ್ಬರು ಮಕ್ಕಳು 7 ಮತ್ತು 12 ವರ್ಷ ವಯಸ್ಸಿನವರಾಗಿದ್ದು, ಅವಶೇಷಗಳ ಅಡಿಯಲ್ಲಿ ಇನ್ನೂ ಮೂರರಿಂದ ನಾಲ್ಕು ಜನರು ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 72 ವರ್ಷದ ರಾಮ್‌ಜಿ ದಾಸ್ ಎಂಬುವವರನ್ನು ರಕ್ಷಿಸಲಾಗಿದ್ದು, ಅವರ ತಲೆಗೆ ಗಾಯವಾಗಿತ್ತು. ಸದ್ಯ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಟ್ಟಡದ ನೆಲಮಹಡಿಯು 75 ವರ್ಷ ಹಳೆಯದ್ದು ಎನ್ನಲಾಗಿದ್ದು, ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇನ್ನುಳಿದವುಗಳು ವಾಸಕ್ಕೆ ಬಳಸಲಾಗುತ್ತಿತ್ತು.
ಜಂಟಿ ಪೊಲೀಸ್ ಆಯುಕ್ತ (ಸೆಂಟ್ರಲ್) ಎನ್.ಎಸ್.ಬುಂದೇಲಾ ಮಾತನಾಡಿ, 'ಮಕ್ಕಳಿಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದ ವೇಳೆಯಲ್ಲಿ ಅವರಿಬ್ಬರು ಮೃತಪಟ್ಟಿದ್ದಾರೆ. ಕಟ್ಟಡ ಕುಸಿಯುವ ವೇಳೆ ಅವರಿಬ್ಬರು ತಮ್ಮ ತಾಯಿಯೊಂದಿಗೆ ಹಾದು ಹೋಗುತ್ತಿದ್ದರು. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಟ್ಟಡದ ಅವಶೇಷಗಳು ಮೇಲೆ ಬಿದ್ದಿದ್ದರಿಂದ ಸಮೀಪದಲ್ಲೇ ನಿಲ್ಲಿಸಿದ್ದ ಕಾರಿಗೂ ತೀವ್ರ ಹಾನಿಯಾಗಿದೆ.
ಸ್ಥಳಕ್ಕೆ ಸ್ಥಳೀಯ ತಂಡ, ಎಂಸಿಡಿ, ಎನ್‌ಡಿಆರ್‌ಎಫ್ ಸೇರಿ ಇತರ ತಂಡಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ರಕ್ಷಣಾ ಕಾರ್ಯಾಚರಣೆಗಾಗಿ ಏಳು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿಮರಾಪುರದ ಎಎಪಿ ಶಾಸಕ ದಿಲೀಪ್ ಪಾಂಡೆ ಟ್ವೀಟ್ ಮಾಡಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಘಟನೆಯು ದುರದೃಷ್ಟಕರ. ಮಲ್ಕಗಂಜ್‌ನಲ್ಲಿ ಲಕ್ಷ್ಮಣ ಪ್ರಸಾದ್ ಜಿ ಅವರ 75 ವರ್ಷದ ಹಳೆಯ ಕಟ್ಟಡ ಕುಸಿದಿದೆ. ದೆಹಲಿ ಸರ್ಕಾರದ ಕ್ಯೂಆರ್‌ಟಿ ತಂಡ, ಅಗ್ನಿಶಾಮಕ ದಳ ಮತ್ತು ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದ್ದು, ಇನ್ನೂ 7-8 ಜನರು ಸಿಲುಕಿರುವ ಶಂಕೆಯಿದೆ' ಎಂದಿದ್ದಾರೆ.