ನವದೆಹಲಿ :2012 ಹಾಗೂ 2019ರ ನಡುವೆ ಪುರುಷ ಹಾಗೂ ಮಹಿಳೆಯರಲ್ಲಿ ಕ್ರಮವಾಗಿ ಶೇ.52.4 ಹಾಗೂ ಶೇ.47.6 ಕ್ಯಾನ್ಸರ್ ರೋಗದ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮ (ಎನ್ಸಿಆರ್ಪಿ) ಪ್ರಕಟಿಸಿದ ವರದಿ ತಿಳಿಸಿದೆ.
ವರದಿಯಾದ ಎಲ್ಲಾ ಕ್ಯಾನ್ಸರ್ ಪ್ರಕರಣಗಳ ಪೈಕಿ ಶೇ.7.9ರಷ್ಟು ಬಾಲ್ಯಕಾಲದ ಕ್ಯಾನ್ಸರ್ (0-14 ವರ್ಷಗಳು)ಗಳನ್ನು ಒಳಗೊಂಡಿದೆ ಎಂದು ಆಸ್ಪತ್ರೆಗಳ ಕ್ಯಾನ್ಸರ್ ರೋಗಿಗಳ ನೋಂದಣಿಗಳನ್ನು ಆಧಿಸಿದ ಈ ವರದಿ ಹೇಳಿದೆ.
ಪುರುಷರಲ್ಲಿ ಶೇ.48.7ರಷ್ಟು ಕ್ಯಾನ್ಸರ್ಗಳು ಹಾಗೂ ಮಹಿಳೆಯರಲ್ಲಿ ಶೇ.16.5ರಷ್ಟು ಕ್ಯಾನ್ಸರ್ ಪ್ರಕರಣಗಳು ತಂಬಾಕಿನಿಂದ ಬಳಕೆಯೊಂದಿಗೆ ನಂಟು ಹೊಂದಿದೆಯೆಂದು ಅದು ಹೇಳಿದೆ.
ಎನ್ಸಿಆರ್ಪಿ ಯೋಜನೆಯಡಿ ಸಮೀಕ್ಷೆ ನಡೆಸಲಾದ ಈ 96 ಆಸ್ಪತ್ರೆಗಳ ಪೈಕಿ ಒಟ್ಟು 13,32,207 ಕ್ಯಾನ್ಸರ್ ಪ್ರಕರಣಗಳು ತಂಬಾಕಿನ ಜೊತೆ ನಂಟು ಹೊಂದಿದ್ದು, ಪೀಡಿತರಲ್ಲಿ ಶೇ.48.7 ಪುರುಷರು ಹಾಗೂ ಶೇ.16.5 ಮಂದಿ ಮಹಿಳೆಯರು ಎಂದು ವರದಿ ಹೇಳಿದೆ.
2012-19ರ ಸಾಲಿನಲ್ಲಿ 96 ಆಸ್ಪತ್ರೆಗಳಲ್ಲಿ 13,32,207 ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ.
ಈ ವರದಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹಾಗೂ ಬೆಂಗಳೂರಿನ ರೋಗ ಮಾಹಿತಿಶಾಸ್ತ್ರ ಕುರಿತ ರಾಷ್ಟ್ರೀಯ ಕೇಂದ್ರ ಹಾಗೂ ಸಂಶೋಧನೆ ಸಿದ್ಧಪಡಿಸಿದೆ. ಈ ವರದಿಯ ಪ್ರಕಾರ ಪುರುಷರಲ್ಲಿ ಪತ್ತೆಯಾದ ಕ್ಯಾನ್ಸರ್ ಪ್ರಕರಣಗಳಲ್ಲಿ ಮೂರನೇ ಒಂದರಷ್ಟು ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಸಂಬಂಧಿಸಿದ ಕ್ಯಾನ್ಸರ್ಗಳಾಗಿವೆ. ಮಹಿಳೆಯರಲ್ಲಿ ಕಂಡುಬಂದಿರುವ ಅರ್ಧಾಂಶಕ್ಕಿಂತಲೂ ಅಧಿಕ ಕ್ಯಾನ್ಸರ್ ಪ್ರಕರಣಗಳು ಸ್ತನದ ಕ್ಯಾನ್ಸರ್ (ಶೇ.51) ಸೇರಿದಂತೆ ಸ್ತ್ರೀರೋಗಕ್ಕೆ ಸಂಬಂಧಿಸಿ ಕ್ಯಾನ್ಸರ್ಗಳಾಗಿವೆ.
ಥೈರಾಯ್ಡ ಕ್ಯಾನ್ಸರ್ (ಮಹಿಳೆಯರಲ್ಲಿ ಶೇ.2.5 ಹಾಗೂ ಪುರುಷರಲ್ಲಿ 1 ಶೇ.) ಹಾಗೂ ಪಿತ್ತಕೋಶ ಕ್ಯಾನ್ಸರ್ (ಮಹಿಳೆಯರಲ್ಲಿ ಶೇ.3.7 ಹಾಗೂ ಶೇ.2.2) ಹೊರತುಪಡಿಸಿ ನಿರ್ದಿಷ್ಟ ಅಂಗಕ್ಕೆ ತಗಲುವ ಕ್ಯಾನ್ಸರ್ಗಳ ಪ್ರಮಾಣವು ಮಹಿಳೆಯರಿಗಿಂತ ಪುರುಷರಲ್ಲೇ ಹೆಚ್ಚಾಗಿ ಕಂಡುಬಂದಿದೆ. ಪ್ರಾಸ್ಟ್ರೇಟ್ ಕ್ಯಾನ್ಸರ್ ಹೊರತುಪಡಿಸಿ ಉಳಿದ ಎಲ್ಲಾ ಅಂಗಗಳಲ್ಲಿಯೂ ಅಧಿಕ ಪ್ರಮಾಣದ ಕ್ಯಾನ್ಸರ್ ಪ್ರಕರಣಗಳು 45ರಿಂದ 64 ವರ್ಷದ ನಡುವಿನ ಅವಧಿಯಲ್ಲಿ ವರದಿಯಾಗಿವೆ. ಪ್ರಾಸ್ಟ್ರೇಟ್ ಕ್ಯಾನ್ಸರ್ ಪ್ರಕರಣಗಳು ಮಾತ್ರ 65 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಲ್ಲಿ ಅಧಿಕ ಪ್ರಮಾಣದಲ್ಲಿ ಕಂಡುಬಂದಿವೆ.
ಬಹುತೇಕ ಕ್ಯಾನ್ಸರ್ ಪ್ರಕರಣಗಳಲ್ಲಿ ಕಿಮೋಥೆರಪಿ ಸಾಮಾನ್ಯವಾಗಿ ಬಳಕೆಯಾಗುವ ಚಿಕಿತ್ಸಾ ವಿಧಾನವಾಗಿದೆ. ರೋಗಪತ್ತೆಯಾದ 8ರಿಂದ 30 ದಿನಗಳ ನಡುವಿನ ಅವಧಿಯೊಳಗೆ ಬಹುತೇಕ ಕ್ಯಾನ್ಸರ್ ರೋಗಿಗಳು ಕ್ಯಾನ್ಸರ್ ಚಿಕಿತ್ಸೆಯನ್ನು ಆರಂಭಿಸಿದ್ದಾರೆಂದು ಸಮೀಕ್ಷಾ ವರದಿ ತಿಳಿಸಿದೆ.