ಪಟ್ಟಣಂತಿಟ್ಟ: ಕೊನ್ನಿ ಆನೆ ಕ್ಯಾಂಪಿಗೆ ಇತ್ತೀಚಿಗೆ ಸೇರ್ಪಡೆಯಾಗಿದ್ದ ಹೊಸ ಸದಸ್ಯ ಕಡಿಮೆ ಅವಧಿಯಲ್ಲಿ ಪ್ರವಾಸಿಗರ ಕಣ್ಮಣಿಯಾಗಿದ್ದಾನೆ. ಕೆಲ ಸಮಯದ ಹಿಂದಷ್ಟೆ ಕೊಚಂಡಿ ಚೆಕ್ ಪೋಸ್ಟ್ ಬಳಿ ಕಾಲುವೆಯಲ್ಲಿ ಮುಳುಗುತ್ತಿದ್ದ ಮರಿಯಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದರು.
ಆ ಮರಿಯಾನೆ ಈಗ ಕೊನ್ನಿ ಆನೆ ಕ್ಯಾಂಪಿನ ನಿವಾಸಿ. ಅದಕ್ಕೆ ಕಣ್ಣನ್ ಎಂದು ನಾಮಕರಣ ಮಾಡಲಾಗಿದೆ. 8 ತಿಂಗಳ ಈ ಮರಿಯಾನೆ ತನ್ನ ಚಟುವಟಿಕೆಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪ್ರವಾಸಿಗರ ಪ್ರೀತಿಗೆ ಪಾತ್ರನಾಗಿದ್ದಾನೆ.
ಕಾಲುವೆಯಿಂದ ರಕ್ಷಿಸಲ್ಪಟ್ಟ ಮರಿಯಾನೆ ಗುಂಪಿನಿಂದ ಬೇರೆಯಾಗಿದೆ ಎಂದು ತಿಳಿದು ಅದರ ಗುಂಪಿನೊಡನೆ ಸೇರಿಸಲು ಅರಣ್ಯ ಇಲಾಖೆ ಪ್ರಯತ್ನ ಪಟ್ಟಿತ್ತು. ಕಣ್ಣನ್ ನನ್ನು ಕಾಡಿನಲ್ಲಿ ಬಿಟ್ಟು ಯಾವುದಾದರೂ ಆನೆಯ ಹಿಂಡು ಅದನ್ನು ಸ್ವೀಕರಿಸುವುದೋ ಏನೋ ಎಂದು ಪರಿಶೀಲನೆ ನಡೆಸಲಾಗಿತ್ತು. ಆದರೆ ಮರಿಯಾನೆಯನ್ನು ಹಾದು ಹೋದ ಎರಡು ಆನೆಗಳ ಹಿಂದು ಕಣ್ಣನ್ ನನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ಇನ್ನುಮುಂದೆ ಕಣ್ಣನ್ ಕೊನ್ನಿ ಕ್ಯಾಂಪಿನಲ್ಲಿ ಬಿಡಾರ ಹೂಡಲಿದ್ದಾನೆ.