ನವದೆಹಲಿ: ಕೊರೊನಾ ಮೂರನೇ ಅಲೆ ಭೀತಿ ಜೊತೆ ಜೊತೆಗೆ ಬಹುಪಾಲು ರಾಜ್ಯಗಳಲ್ಲಿ ಶಾಲೆಗಳನ್ನು ಪುನರಾರಂಭಿಸಲಾಗಿದೆ. ಸೋಂಕಿನಿಂದ ಮಕ್ಕಳ ರಕ್ಷಣೆ ಹೇಗೆ ಎಂಬ ಬಗ್ಗೆ ಕೇಂದ್ರದಿಂದ ಇನ್ನೂ ಸ್ಪಷ್ಟ ಉತ್ತರ ದೊರೆತಿಲ್ಲ. ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಕುರಿತು ಘೋಷಣೆ ಮಾಡಿಲ್ಲ.
ಈ ಎಲ್ಲಾ ಗೊಂದಲಗಳ ನಡುವೆ ಶಾಲೆಗಳನ್ನು ಪುನರಾರಂಭಿಸಲಾಗಿದೆ. ದೆಹಲಿ ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ ಶಾಲೆಗಳ ಪುನರಾರಂಭವನ್ನು ಬೆಂಬಲಿಸಿದ್ದಾರೆ. ಜೊತೆಗೆ ಮಕ್ಕಳಿಗೆ ಲಸಿಕೆ ನೀಡಲು ಒಂಬತ್ತು ತಿಂಗಳ ಅವಧಿ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೂ ಶಾಲೆಗಳನ್ನು ಆರಂಭಿಸದೇ ಇರುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
'ಮುಂದಿನ ವರ್ಷದ ಮಧ್ಯದವರೆಗೆ ಶಾಲೆಗಳನ್ನು ಮುಚ್ಚಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಆದರೆ ಕೇರಳದಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಕಾರಣ ಅಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಬಾರದು. ದೆಹಲಿಯಂಥ ಪಾಸಿಟಿವಿಟಿ ದರ ಕಡಿಮೆ ಇರುವ ರಾಜ್ಯಗಳಲ್ಲಿ ಶಾಲೆಗಳನ್ನು ಮತ್ತೆ ತೆರೆಯಲು ಇದು ಉತ್ತಮ ಸಮಯ ಎಂದು ತಿಳಿಸಿದರು.
ಶಾಲೆಗಳ ಪುನರಾರಂಭವನ್ನು ಸಮರ್ಥಿಸಿಕೊಂಡಿರುವ ಅವರು, 'ಶಾಲೆಗಳನ್ನು ತೆರೆಯುವುದನ್ನು ನಾನು ಬೆಂಬಲಿಸುತ್ತೇನೆ. ಮಕ್ಕಳಿಗೆ ದೈಹಿಕ ಸಂವಹನವೂ ಮುಖ್ಯವಾಗುತ್ತದೆ. ಅಲ್ಲದೇ ಹಲವು ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಪಡೆಯುವ ಅವಕಾಶವೂ ಇಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು' ಎಂದಿದ್ದಾರೆ.
'ಆದರೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಕ್ರಮಗಳನ್ನು ಆಡಳಿತ ಮಂಡಳಿಗಳು ಹೊಂದಿರಬೇಕು. ಎಲ್ಲಾ ಸಿಬ್ಬಂದಿ ಲಸಿಕೆ ಪಡೆದುಕೊಂಡಿರಬೇಕು. ಮಕ್ಕಳು ಶಾಲೆ ಪ್ರವೇಶಿಸುವಾಗ ಹಾಗೂ ಶಾಲೆ ಬಿಡುವಾಗ, ಊಟದ ಸಮಯದಲ್ಲಿ ಒಂದೇ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ತಡೆಯಬೇಕು. ಇದರೊಂದಿಗೆ ಶಾಲೆಯಲ್ಲಿ ಕೊರೊನಾ ಪ್ರಕರಣ ದಾಖಲಾದ ತಕ್ಷಣ ಶಾಲೆಯನ್ನು ಮುಚ್ಚಬೇಕು' ಎಂದು ತಿಳಿಸಿದರು.
'ಚಿಕ್ಕ ಮಕ್ಕಳಿಗೆ ಕೊರೊನಾ ಅಪಾಯವಿಲ್ಲ. ಹೀಗಾಗಿ ಶಾಲೆ ಆರಂಭಿಸಿರುವ ಕುರಿತು ಚಿಂತೆ ಅನಗತ್ಯ. ಹೈದರಾಬಾದ್‌ನ ಭಾರತ್ ಬಯೋಟೆಕ್ ಮುಂದಿನ ದಿನಗಳಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಬಳಕೆ ಅನುಮೋದನೆಗೆ ಅರ್ಜಿ ಸಲ್ಲಿಸಲಿದೆ. ಈ ತಿಂಗಳೇ ಅನುಮೋದನೆ ಪಡೆಯುವ ಸಾಧ್ಯತೆಯಿದೆ' ಎಂದು ಮಾಹಿತಿ ನೀಡಿದರು.
ಭಾರತದಲ್ಲಿ ಪ್ರಸ್ತುತ ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆ ಝೈಕೋವ್-ಡಿ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ಕೊಡಲು ಅನುಮೋದನೆ ನೀಡಲಾಗಿದೆ. ದೇಶದಲ್ಲಿ ಮಕ್ಕಳಿಗೆ ನೀಡಲು ಅನುಮೋದನೆ ಪಡೆದ ಏಕೈಕ ಲಸಿಕೆ ಇದಾಗಿದೆ.
ಕೊರೊನಾ ಎರಡನೇ ಅಲೆ ತೀವ್ರತೆ ತಗ್ಗಿದ ನಂತರ ಜುಲೈ-ಆಗಸ್ಟ್‌ನಲ್ಲಿ ಬಹುಪಾಲು ರಾಜ್ಯಗಳು ಶಾಲೆಗಳನ್ನು ಪುನರಾರಂಭಿಸಿವೆ. ಮೂರನೇ ಅಲೆ ಭೀತಿ ಎದುರಾಗಿರುವ ಈ ಸಂದರ್ಭದಲ್ಲಿ ಶಾಲೆಗಳನ್ನು ತೆರೆದಿರುವ ಕುರಿತು ಆಕ್ಷೇಪಗಳು ವ್ಯಕ್ತವಾಗಿವೆ.
ಶಾಲೆಗಳನ್ನು ತೆರಯುತ್ತಿದ್ದಂತೆ ಹಲವಾರು ರಾಜ್ಯಗಳಲ್ಲಿ ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ ಎಂದು ವರದಿಯಾಗಿದೆ. ಗುಜರಾತ್, ಪಂಜಾಬ್, ಬಿಹಾರ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ಉತ್ತರಾಖಂಡದಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿದೆ.
ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿರುವ ಅಂಕಿ ಅಂಶಗಳು ಶೇಕಡ 9.6ಕ್ಕೆ ಏರಿಕೆಯಾಗಿದೆ. ಬಿಹಾರ, ಮಧ್ಯ ಪ್ರದೇಶ, ಗುಜರಾತ್, ಛತ್ತೀಸ್‌ಗಢ ಮಕ್ಕಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇಕಡ 2 ರಿಂದ 3ರ ನಡುವೆ ಇದೆ.
ಅಕ್ಟೋಬರ್‌ನಲ್ಲಿ ಮಕ್ಕಳಿಗೆ ಕೊರೊನಾ ವೈರಸ್ ಸೋಂಕಿನ ವಿರುದ್ದ ಲಸಿಕೆಯನ್ನು ನೀಡಲು ಆರಂಭ ಮಾಡುವ ಸಾಧ್ಯತೆಯಿದೆ.