ನವದೆಹಲಿ, ಸೆಪ್ಟೆಂಬರ್ 26: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕಾಣಿಸಿಕೊಂಡಿರುವ ಗುಲಾಬ್ ಚಂಡಮಾರುತ ಈಗ ನಿರೀಕ್ಷೆಯಂತೆ ಆಂಧ್ರಪ್ರದೇಶ, ಒಡಿಶಾಕ್ಕೆ ಅಪ್ಪಳಿಸಿದೆ. ಆಂಧ್ರಪ್ರದೇಶ, ಒಡಿಶಾಕ್ಕೆ ಅಪ್ಪಳಿಸಿರುವ ಗುಲಾಬ್ ಚಂಡಮಾರುತವು ಕರಾವಳಿ ಭಾಗದಲ್ಲಿ ಭೂಕುಸಿತವನ್ನು ಉಂಟು ಮಾಡಿದೆ ಎಂದು ಹವಾಮಾನ ಇಲಾಖೆಯು ಸಂಜೆಯ ವೇಳೆಗೆ ಟ್ವೀಟ್ ಮಾಡಿದೆ.
"ಮುಂದಿನ ಮೂರು ಗಂಟೆಗಳ ಒಳಗಾಗಿ ಒಡಿಶಾದ ಗೋಪಾಲ್‌ಪುರ ಹಾಗೂ ಆಂಧ್ರ ಪ್ರದೇಶದ ಕಾಳಿಂಗ ಪಟ್ಟಣಂ ಅನ್ನು ದಾಟಲಿದೆ," ಎಂದು ಹವಾಮಾನ ಇಲಾಖೆಯು ಹೇಳಿದೆ. "ಈ ಚಂಡಮಾರುತವು ಕರಾವಳಿ ಭಾಗವನ್ನು ಅಪ್ಪಳಿಸಿದೆ ಹಾಗೂ ಇದರಿಂದಾಗಿ ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಹಾಗೂ ಒಡಿಶಾದ ಕರಾವಳಿ ಭಾಗದಲ್ಲಿ ಭೂ ಕುಸಿತ ಉಂಟಾಗಿದೆ. ಇನ್ನು ಮೂರು ಗಂಟೆಗಳಲ್ಲಿ ಕಾಳಿಂಗಪುರಪಟ್ಟಣ ಹಾಗೂ ಗೋಪಾಲಪುರವನ್ನು ದಾಟಿ ಕಾಳಿಂಗಪುರ ಪಟ್ಟನದ ಉತ್ತರಕ್ಕೆ ಸಾಗಲಿದೆ," ಎಂದು ಭಾರತೀಯ ಹವಮಾನ ಇಲಾಖೆ ಟ್ವೀಟ್ ಮಾಡಿದೆ.
ನಾಲ್ಕು ತಿಂಗಳುಗಳ ಹಿಂದೆ ಯಾಸ್ ಚಂಡಮಾರುತವು ಒಡಿಶಾದಲ್ಲಿ ಭಾರೀ ನಷ್ಟ, ಪ್ರಾಣ ಹಾನಿಗೆ ಕಾರಣವಾಗಿದೆ. ಇದೀಗ ಒಡಿಶಾಕ್ಕೆ ಗುಲಾಬ್ ಚಂಡಮಾರುತವೂ ಕೂಡಾ ಅಪ್ಪಳಿಸಲಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್, "ಈ ಗುಲಾಬ್ ಚಂಡಮಾರುತದಿಂದಾಗಿ ಯಾವುದೇ ನಷ್ಟ ಉಂಟಾಗದಂತೆ ನೋಡಿಕೊಳ್ಳಲು ಎಲ್ಲಾ ಕಾರ್ಯವನ್ನು ಮಾಡಲಾಗಿದೆ. ಮುಖ್ಯವಾಗಿ ಗಂಜಮ್, ರಾಯಗಢ, ನಾಬರಂಗಪುರ ಹಾಗೂ ಮಾಲ್ಕನ್‌ಗಿರಿಯಲ್ಲಿ ಅಗತ್ಯ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗಿದೆ," ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಒಡಿಶಾದಲ್ಲಿ ಕೆಲ ಭಾಗದಲ್ಲಿನ ಚಂಡಮಾರುತದ ಸ್ಥಿತಿಗತಿ ಕುರಿತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, "ಚಂಡಮಾರುತದ ಪರಿಸ್ಥಿತಿ ಬಗ್ಗೆ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜಿ ಅವರೊಂದಿಗೆ ಚರ್ಚಿಸಿದೆ. ಈ ಪ್ರತಿಕೂಲ ಪರಿಸ್ಥಿತಿಯಿಂದ ಹೊರಬರಲು ಕೇಂದ್ರ ಸಾಧ್ಯವಾದ ಎಲ್ಲ ನೆರವಿನ ಭರವಸೆ ನೀಡುತ್ತದೆ. ಪ್ರತಿಯೊಬ್ಬ ಜನರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ," ಎಂದು ಹೇಳಿದ್ದಾರೆ.
ಶ್ರೀಕಾಕುಲಂ ಕಲೆಕ್ಟರ್ ಸುಮಿತ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಇನ್ನು ಮುಂದಿನ ಎರಡು ಗಂಟೆಗಳು ತೀರಾ ಕಠಿಣವಾಗಿರಲಿದೆ. ಗಂಟೆಗೆ 90-100 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇದೆ ಎಂದಿದ್ದಾರೆ. ಎನ್‌ಡಿಆರ್‌ಎಫ್‌ನ ಎರಡು ತಂಡ ಹಾಗೂ ಎಸ್‌ಡಿಆರ್‌ಎಫ್‌ನ ನಾಲ್ಕು ತಂಡಗಳು ಜಿಲ್ಲೆಗೆ ಬಂದಿದೆ. ಭಾರೀ ಮಳೆಯಾಗುತ್ತಿದ್ದು, ಇದರಿಂದಾಗಿ ನೆರೆ ಉಂಟಾಗಬಹುದು. ಈ ಮೂಲಕ ನಮಗೆ ಇನ್ನೊಂದು ಸವಾಲು ಎದುರಾಗಬಹುದು. ಜಿಲ್ಲೆಯ 19 ಮಂಡಲಗಳು ಪ್ರವಾಹ ಪೀಡಿತವಾಗಿದೆ," ಎಂದು ಮಾಹಿತಿ ನೀಡಿದ್ದಾರೆ.
ಇನ್ನು "ಐವರು ಮೀನುಗಾರರು ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಸಮುದ್ರ ಪಾಲಾಗಿದ್ದಾರೆ. ಭಾರೀ ಗಾಳಿ ಬರುತ್ತಿದ್ದ ಸಂದರ್ಭದ ಹಡಗಿಯಲ್ಲಿದ್ದ ಮೀನುಗಾರರು ಹಡಗು ಮುಗುಚಿನೀಡಿಗೆ ಬಿದ್ದಿದ್ದಾರೆ" ಎಂದು ಹೇಳಲಾಗಿದೆ. ಪೊಲೀಸರು ಹಾಗೂ ಇತರೆ ಸಿಬ್ಬಂದಿಗಳು ರಕ್ಷಣೆ ಕಾರ್ಯ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಒಡಿಶಾದಲ್ಲಿ ಸುಮಾರು 42 ರಕ್ಷಣಾ ತಂಡಗಳು ಆಗಮಿಸಿದೆ. ರಾಷ್ಟ್ರೀಯ ವಿಪತ್ತು ನಿಗ್ರಹ ದಳದ 24 ಸ್ಕ್ವಾಡ್‌ಗಳು ಆಗಮಿಸಿದೆ. ಸುಮಾರು ನೂರರಷ್ಟು ಅಗ್ನಿ ಶಾಮಕದಳದ ತಂಡವು ಇದೆ. ವಿಶೇಷ ಪರಿಹಾರ ಆಯುಕ್ತ ಪಿ ಕೆ ಜೆನಾ, "ಚಂಡಮಾರುತವು ಪ್ರದೇಶದ ಮೂಲಕ ಹಾದುಹೋಗುವ ವಿಶೇಷವಾಗಿ ಭಾನುವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆ 10 ಗಂಟೆಯವರೆಗೆ ಜನರು ಮನೆಯೊಳಗೆ ಇರಲು ಮುಖ್ಯಮಂತ್ರಿ ಸೂಚಿಸಿದ್ದಾರೆ," ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗಮೋಹನ್ ರೆಡ್ಡಿ ಜೊತೆಗೆ ಗುಲಾಬ್ ಚಂಡಮಾರುತದಿಂದ ಉಂಟಾಗಿರುವ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರದ ಕಡೆಯಿಂದ ಸಾಧ್ಯವಾದ ಎಲ್ಲ ನೆರವು ನೀಡುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗಮೋಹನ್ ರೆಡ್ಡಿಗೆ ಭರವಸೆ ನೀಡಿದರು.
ಈ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. "ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಗುಲಾಬ್ ಚಂಡಮಾರುತದಿಂದ ಉಂಟಾಗಿರುವ ಪರಿಸ್ಥಿತಿ ಕುರಿತು ಸಮಾಲೋಚಿಸಿದೆ. ಕೇಂದ್ರದಿಂದ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡುತ್ತೇನೆ. ನಾವು ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತೇನೆ," ಎಂದು ಹೇಳಿದ್ದಾರೆ.