HEALTH TIPS

ಗ್ರಾಮೀಣ ಬಡಮಕ್ಕಳ ಶೇ.97 ಪೋಷಕರಿಂದ ಶಾಲೆ ಮರು ಆರಂಭಕ್ಕೆ ಒತ್ತಾಯ: ಸಮೀಕ್ಷೆ

                ನವದೆಹಲಿ :ಗ್ರಾಮೀಣ ಭಾರತದ ಬಡಮಕ್ಕಳ ಶೇ.97 ಪೋಷಕರು ಆದಷ್ಟು ಬೇಗ ಶಾಲೆ ಮರು ಆರಂಭವಾಗಲು ಬಯಸಿದ್ದಾರೆ ಎಂಬುದನ್ನು 15 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಗಸ್ಟ್‌ನಲ್ಲಿ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ.

              ಕೊರೋನ ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ಬಳಿಕ ಕಳೆದ ವರ್ಷ ಮಾರ್ಚ್‌ನಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ಕೋವಿಡ್ ಎರಡನೇ ಅಲೆ ತೀವ್ರತೆ ಕುಗ್ಗಿರುವುದರಿಂದ ಕೆಲವು ರಾಜ್ಯಗಳಲ್ಲಿ ಸೆಕೆಂಡರಿ ಶಾಲೆಗಳ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭಿಸಲಾಗಿತ್ತು. ಆದರೆ, ಇದಕ್ಕಿಂತ ಕೆಳಗಿನ ತರಗತಿಯ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಯಾವಾಗ ಸಾಧ್ಯವಾಗಲಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಸುಮಾರು 1,400 ಶಾಲಾ ಮಕ್ಕಳ ಸಮೀಕ್ಷೆ ಆಧರಿಸಿದ ಈ ವರದಿ ಹಿಂದುಳಿದ ಮನೆಗಳಲ್ಲಿ ಆನ್‌ಲೈನ್ ಶಿಕ್ಷಣ ಬೀರಿದ ವಿನಾಶಕಾರಿ ಪರಿಣಾಮವನ್ನು ಬಹಿರಂಗಪಡಿಸಿದೆ.

            ಈ ವರದಿಯನ್ನು ಸುಮಾರು 100 ಮಂದಿ ಸ್ವಯಂ ಸೇವಕರೊಂದಿಗೆ ಆರ್ಥಿಕ ತಜ್ಞರಾದ ಜೀನ್ ಡ್ರೆಜ್ ಹಾಗೂ ರಿತಿಕಾ ಖೇರಾ ಸಿದ್ಧಪಡಿಸಿದ್ದಾರೆ. ''ವಿದ್ಯಾರ್ಥಿಗಳ ಸರಳ ಓದಿನ ಪರೀಕ್ಷೆಯ ಫಲಿತಾಂಶ ಕಳವಳಕಾರಿ. ಸಮೀಕ್ಷೆಗೆ ಪರಿಗಣಿಸಿದ ಮಕ್ಕಳಲ್ಲಿ ಸುಮಾರು ಅರ್ಧದಷ್ಟು ಮಕ್ಕಳಿಗೆ ಕೆಲವು ಪದಗಳನ್ನು ಮಾತ್ರ ಓದಲು ಸಾಧ್ಯವಾಯಿತು'' ಎಂದು ವರದಿ ಹೇಳಿದೆ. ''ಶಾಲೆ ಮುಚ್ಚಿರುವುದರಿಂದ ತಮ್ಮ ಮಕ್ಕಳ ಓದುವ ಹಾಗೂ ಬರೆಯುವ ಸಾಮರ್ಥ್ಯ ಕುಂಠಿತವಾಗಿದೆ ಎಂದು ಹೆಚ್ಚಿನ ಪೋಷಕರು ಅಭಿಪ್ರಾಯಿಸಿದ್ದಾರೆ.

            ಹತಾಶರಾಗಿರುವ ಅವರು ಶಾಲೆ ಆರಂಭವಾಗಲು ಕಾಯುತ್ತಿದ್ದಾರೆ. ವಾಸ್ತವವಾಗಿ ಅವರಲ್ಲಿ ಹೆಚ್ಚಿನವರಿಗೆ ತಮ್ಮ ಬದುಕಿಗಿಂತ ಮಕ್ಕಳ ಬದುಕು ಹಸನಾಗಲು ಶಾಲಾ ಶಿಕ್ಷಣ ಏಕೈಕ ಆಶಾಕಿರಣ ಎಂದು ಭಾವಿಸಿದ್ದಾರೆ'' ಎಂದು ವರದಿ ಹೇಳಿದೆ. ಆಗಸ್ಟ್ ಆರಂಭದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ದೇಶದ ಗ್ರಾಮೀಣ ಪ್ರದೇಶದಲ್ಲಿ ಕೇವಲ ಶೇ. 8 ಮಕ್ಕಳು ಮಾತ್ರ ಆನ್‌ಲೈನ್ ತರಗತಿ ಮೂಲಕ ಪ್ರತಿನಿತ್ಯ ಕಲಿಯುತ್ತಿದ್ದಾರೆ. ಶೇ.37 ಮಕ್ಕಳು ಕಲಿಯುತ್ತಿಲ್ಲ ಎಂದು ಸಮೀಕ್ಷೆ ಆಧರಿಸಿದ ವರದಿ ಹೇಳಿದೆ. ಹಲವು ಬಡವರ ಮನೆಗಳಲ್ಲಿ ಸ್ಮಾರ್ಟ್ ಫೋನ್ ಇಲ್ಲದೇ ಇರುವುದು ಇದಕ್ಕೆ ಪ್ರಮುಖ ಕಾರಣ. ''ನಗರ ಪ್ರದೇಶಗಳ ಸ್ಮಾರ್ಟ್ ಫೋನ್ ಇರುವ ಮನೆಗಳಲ್ಲಿ ಕೂಡಾ ಆನ್‌ಲೈನ್‌ನಲ್ಲಿ ದಿನನಿತ್ಯ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಕೇವಲ ಶೇ.31. ಗ್ರಾಮೀಣ ಪ್ರದೇಶಗಳ ಮಕ್ಕಳ ಸಂಖ್ಯೆ ಕೇವಲ ಶೇ. 8'' ಎಂದು ವರದಿ ಹೇಳಿದೆ.

             ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಿದ ಸಂದರ್ಭ ಕಲಿಯಲು ಆನ್‌ಲೈನ್ ತರಗತಿ ಲಭ್ಯವಾಗದ ವಿದ್ಯಾರ್ಥಿಗಳಿಗೆ ಮಹಾರಾಷ್ಟ್ರ, ಅಸ್ಸಾಂ, ಬಿಹಾರ್, ಜಾರ್ಖಂಡ್ ಹಾಗೂ ಉತ್ತರಪ್ರದೇಶದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೊಂದೆಡೆ ಮನೆಗೆಲಸವಾಗಿ ಆಫ್‌ಲೈನ್ ಕಲಿಕಾ ಕೆಲಸಗಳನ್ನು ನೀಡಲು ಹಾಗೂ ಸಲಹೆ ನೀಡಲು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡುವಂತೆ ಕರ್ನಾಟಕ, ಪಂಜಾಬ್ ಹಾಗೂ ರಾಜಸ್ಥಾನದಲ್ಲಿ ಶಿಕ್ಷಕ-ಶಿಕ್ಷಕಿಯರಿಗೆ ಸೂಚಿಸಲಾಗಿದೆ. ''ಮನೆಗೆಲಸ ಕೆಲವೊಮ್ಮೆ ಮಕ್ಕಳ ಅರ್ಥೈಸುವಿಕೆಗಿಂತ ಮೇಲ್ಮಟ್ಟದಲ್ಲಿ ಇರುತ್ತದೆ. ಹಲವು ಮಕ್ಕಳು ತಮ್ಮ ಮನೆಗೆಲಸದ ಬಗ್ಗೆ ಪ್ರತಿಕ್ರಿಯೆ ಪಡೆಯುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಮನೆಯಲ್ಲಿ ಯಾರದೇ ನೆರವು ದೊರೆಯದ ಬಡ ಮಕ್ಕಳಿಗೆ ತರಗತಿ ಕಲಿಕೆಗೆ ಮನೆಗೆಲಸ ಪರ್ಯಾಯವಾಗದು'' ಎಂದು ವರದಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries