ನವದೆಹಲಿ: ಅಫ್ಘಾನಿಸ್ತಾನ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಅವಲೋಕಿಸಿ ಭಾರತ 'ತುರ್ತು ಆದ್ಯತೆ'ಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಪ್ರಧಾನಿ ಮೋದಿ ಉನ್ನತ ಮಟ್ಟದ ತಂಡಕ್ಕೆ ನಿರ್ದೇಶನ ನೀಡಿದ್ದಾರೆ.
ವಿದೇಶಾಂಗ ವ್ಯವಹಾರ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತಂಡ ಅಫ್ಘಾನಿಸ್ತಾನದ ಬೆಳವಣಿಗೆಗಳ ಕುರಿತು ಮೇಲ್ವಿಚಾರಣೆ ನಡೆಸುತ್ತಿದ್ದು, ಈ ತಂಡಕ್ಕೆ ಪ್ರಧಾನಿ ನಿರ್ದೇಶನ ನೀಡಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟಿನ ವಿಚಾರವಾಗಿ ಈ ತಂಡ ಕೆಲವು ದಿನಗಳಿಂದ ನಿರಂತರ ಭೇಟಿ ಮಾಡುತ್ತಿದ್ದು, ಹಲವು ವಿಷಯಗಳ ಕುರಿತು ಚರ್ಚೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ. ಅಫ್ಘಾನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವುದು ಸೇರಿದಂತೆ ರಾಷ್ಟ್ರೀಯ ಭದ್ರತೆ ವಿಚಾರವಾಗಿ ಚರ್ಚೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಪ್ರತಿ ಘಟನೆಗಳ ಮೇಲೂ ಈ ತಂಡ ನಿಗಾ ಇರಿಸಿದೆ. ಅದಕ್ಕೆ ಅಂತರರಾಷ್ಟ್ರೀಯ ಮಟ್ಟದ ಪ್ರತಿಕ್ರಿಯೆ ಗಮನಿಸುತ್ತಿದ್ದು, ತುರ್ತು ಆದ್ಯತೆಗಳತ್ತ ಗಮನ ಹರಿಸಲಾಗುತ್ತಿದೆ ಎಂದಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಮಂಗಳವಾರ ಬೆಳಿಗ್ಗೆ ಅಂಗೀಕರಿಸಿದ ನಿರ್ಣಯ ಸೇರಿದಂತೆ ಅಫ್ಘಾನಿಸ್ತಾನದ ಪರಿಸ್ಥಿತಿ ಹಾಗೂ ಅದಕ್ಕೆ ಅಂತರರಾಷ್ಟ್ರೀಯ ಪ್ರತಿಕ್ರಿಯೆಗಳನ್ನು ತಂಡ ಗಮನಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಕಳೆದ ಎರಡು ದಿನಗಳಿಂದಲೂ ಭಾರತ ಅಫ್ಘಾನಿಸ್ತಾನದ ವಿಚಾರವಾಗಿ ಅಮೆರಿಕ ಭದ್ರತಾ ಆಯೋಗದ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿನ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವುದು ಭಾರತದ ತಕ್ಷಣದ ಆದ್ಯತೆ. ಭಾರತದ ವಿರುದ್ಧ ಅಫ್ಘಾನ್‌ನಿಂದ ಭಯೋತ್ಪಾದನೆಗೆ ಅವಕಾಶವಿಲ್ಲ ಎಂಬುದರ ಖಾತ್ರಿ ಸಂಬಂಧ ಈ ತಂಡ ಕಾರ್ಯ ನಿರ್ವಹಿಸುತ್ತಿದೆ.
ಸೇನೆಯನ್ನು ಸಂಪೂರ್ಣ ಹಿಂಪಡೆದುಕೊಂಡ ಅಮೆರಿಕ:
ಸೋಮವಾರ ಮಧ್ಯರಾತ್ರಿ ಅಮೆರಿಕ ತನ್ನ ಪಡೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿದೆ. ಇಪ್ಪತ್ತು ವರ್ಷಗಳ ಬಳಿಕ ಅಮೆರಿಕ ಸೇನೆ ಅಫ್ಘಾನಿಸ್ತಾನ ತೊರೆದಿದ್ದು, ಸೋಮವಾರ ಮಧ್ಯರಾತ್ರಿಗೆ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆದುಕೊಂಡು ತೆರವು ಕಾರ್ಯಾಚರಣೆ ಮುಕ್ತಾಯವಾಗಿರುವುದಾಗಿ ಅಮೆರಿಕ ಘೋಷಿಸಿದೆ. ಅಮೆರಿಕ ಪಡೆಯನ್ನು ಹಿಂತೆಗೆದುಕೊಳ್ಳಲು ಆಗಸ್ಟ್ 31ರ ಗಡುವು ನೀಡಲಾಗಿತ್ತು. ಸೋಮವಾರ ಮಧ್ಯರಾತ್ರಿಯೇ ಅಮೆರಿಕ ತನ್ನ ಯೋಧರ ತೆರವು ಕಾರ್ಯಾಚರಣೆ ಸಂಪೂರ್ಣಗೊಳಿಸಿದೆ.
ಅಮೆರಿಕದ ಪಡೆಗಳು 20 ವರ್ಷಗಳ ಬಳಿಕ ಅಫ್ಘಾನಿಸ್ತಾನ ತೊರೆದ ಬೆನ್ನಲ್ಲೇ ತಾಲಿಬಾನ್ ಸಂಪೂರ್ಣ ಸ್ವಾತಂತ್ರ್ಯ ಘೋಷಿಸಿಕೊಂಡಿದೆ. ಕಾಬೂಲ್‌ನಿಂದ ಅಮೆರಿಕ ಪಡೆ ನಿರ್ಗಮಿಸಿದ ಕೂಡಲೇ ತಾಲಿಬನ್ ಹೋರಾಟಗಾರರು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.
1996 ರಿಂದ 2001ರವರೆಗೂ ಅಫ್ಘಾನಿಸ್ತಾನ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಅಮೆರಿಕ ಸೇನಾಪಡೆ ಕಾರ್ಯಾಚರಣೆಗೆ ಇಳಿಯಿತು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿ ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು.
ಇದೀಗ ಎರಡು ದಶಕಗಳ ಕಾಲ ಅಮೆರಿಕ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ವಶಪಡಿಸಿಕೊಂಡಿದೆ.
ಅಮೆರಿಕ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಣೆ ಮಾಡುತ್ತಿದ್ದಂತೆ ತಾಲಿಬಾನ್ ಅಫ್ಘಾನ್ ವಶಪಡಿಸಿಕೊಳ್ಳುವ ಕಾರ್ಯಾಚರಣೆಗೆ ಇಳಿದು ಇದೀಗ ಕೆಲವೇ ದಿನಗಳಲ್ಲಿ ಹೊಸ ಸರ್ಕಾರ ಆಡಳಿತ ಕಾರ್ಯಸೂಚಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.