ನವದೆಹಲಿ :ಕೇಂದ್ರ ಸರಕಾರಿ ಸ್ವಾಮ್ಯದ ಹಲವು ದೊಡ್ಡ ಮತ್ತು ಮಧ್ಯಮ ಗಾತ್ರದ ಸಾರ್ವಜನಿಕ ರಂಗದ ಸಂಸ್ಥೆಗಳಾದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಮತ್ತು ನಿರ್ಮಾಣ ಸಂಸ್ಥೆ ಎನ್‍ಬಿಸಿಸಿ (ಇಂಡಿಯಾ) ಇವುಗಳು ಕೇಂದ್ರ ಸರಕಾರ ಖಾಸಗೀಕರಣಗೊಳಿಸುವ ಸಂಸ್ಥೆಗಳ ಪ್ರಾರಂಭಿಕ ಪಟ್ಟಿಯಲ್ಲಿರುವ ಸಾಧ್ಯತೆಯಿದೆ. ಪ್ರಮುಖವಲ್ಲದ ಕ್ಷೇತ್ರಗಳಲ್ಲಿರುವ ಎಲ್ಲಾ ಸಾರ್ವಜನಿಕ ರಂಗದ ಸಂಸ್ಥೆಗಳನ್ನು ಮುಚ್ಚಲು ಅಥವಾ ಖಾಸಗೀಕರಣಗೊಳಿಸಲು ಸರಕಾರ ಈಗಾಗಲೇ ನಿರ್ಧರಿಸಿದೆ ಎಂದು financialexpress.com ವರದಿ ಮಾಡಿದೆ.
ಮದ್ರಾಸ್ ಫರ್ಟಿಲೈಝರ್ಸ್ ಹಾಗೂ ನ್ಯಾಷನಲ್ ಫರ್ಟಿಲೈಝರ್ಸ್ ಕೂಡ ಖಾಸಗೀಕರಣಗೊಳ್ಳಬಹುದಾದ ಸಂಸ್ಥೆಗಳಲ್ಲಿ ಸೇರಿವೆ.
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಕೇಂದ್ರ ಸರಕಾರ ಶೇ 65ರಷ್ಟು ಪಾಲುದಾರಿಕೆ ಹೊಂದಿದ್ದು ಇದರ ಮೊತ್ತ ರೂ. 29,600 ಆಗಿದ್ದರೆ ಎನ್‍ಬಿಸಿಸಿಯಲ್ಲಿ ಸರಕಾರದ ಶೇ 61.75ರಷ್ಟು ಪಾಲುದಾರಿಕೆಯ ಈಗಿನ ಮೌಲ್ಯ ರೂ. 5200 ಕೋಟಿಯಷ್ಟಾಗಲಿದೆ.
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಥವಾ ಸೈಲ್ ಅಸಾನ್ಸೋಲ್, ಭಿಲಾಯ್, ಬೊಕಾರೋ ದುರ್ಗಾಪುರ್ ಮತ್ತು ರೂರ್ಕೆಲಾದಲ್ಲಿ ಉಕ್ಕಿನ ಸ್ಥಾವರಗಳು ಹಾಗೂ ಮೂರು ಇತರ ವಿಶೇಷ ಉಕ್ಕಿನ ಸ್ಥಾವರಗಳು ಹಾಗೂ ಫೆರ್ರೋ ಅಲಾಯ್ ಸ್ಥಾವರಗಳನ್ನು ಹೊಂದಿದೆ. ಆರ್ಥಿಕ ವರ್ಷ 2021-22ರ ಮೊದಲ ತ್ರೈಮಾಸಿಕದಲ್ಲಿ ಕಳೆದ ತ್ರೈಮಾಸಿಕದ ರೂ 1,270 ಕೊಟಿ ನಷ್ಟಕ್ಕೆ ಹೋಲಿಸಿದಾಗ ಈ ವರ್ಷ ರೂ 3,.850 ಕೋಟಿ ನಿವ್ವಳ ಲಾಭವನ್ನು ಸಂಸ್ಥೆ ದಾಖಲಿಸಿದೆ.
ಅತ್ತ ಎನ್‍ಬಿಸಿಸಿ ಕೂಡ ಆರ್ಥಿಕ ವರ್ಷ 2021-22ರ ಪ್ರಥಮ ತ್ರೈಮಾಸಿಕದಲ್ಲಿ ರೂ 27 ಕೋಟಿ ನಿವ್ವಳ ಲಾಭ ಗಳಿಸಿದೆ.