ಬೆಂಗಳೂರು: ಟ್ವಿಟರ್ನಲ್ಲಿ ಸದಾ ಯಾವುದಾದರೂ ಒಂದು ವಿಷಯ ಟ್ರೆಂಡಿಂಗ್ ಆಗುತ್ತಲೇ ಇರುತ್ತದೆ. ಆ ಮೂಲಕ ಜನರ ಮೂಡ್, ಜಗತ್ತಿನ ದಿನದ ಬೆಳವಣಿಗೆ ಇತ್ಯಾದಿಗಳು ಸುಲಭದಲ್ಲಿ ಅರಿವಿಗೆ ಬರುತ್ತಿರುತ್ತವೆ. ಇಂದು ಮೆಟ್ಟಿಲೊಂದರ ವಿಷಯದ ಕುರಿತಾಗಿ ಮಾಡಿದ್ದ ಟ್ವೀಟ್ಗೆ ಪ್ರತಿಯಾಗಿ ಸರಸ್ವತಿ ಟ್ರೆಂಡಿಂಗ್ ಆಗಿರುವುದರಿಂದ ಪುಸ್ತಕಗಳ ಕುರಿತು ಭಾರತೀಯರ ದೈವಿಕ ಭಾವನೆ ಮತ್ತೊಮ್ಮೆ ಜಾಹೀರಾಗಿದೆ.
ಸುಧೀರ್ ಎಂಬ ಇಂಜಿನಿಯರ್ ಒಬ್ಬರು ಪುಸ್ತಕಗಳ ಶೆಲ್ಫ್ ಥರ ಇರುವಂಥ ಮೆಟ್ಟಿಲ ಚಿತ್ರವೊಂದನ್ನು ಹಂಚಿಕೊಂಡು, 'ಭಾರತೀಯರ ಮನೆಯಲ್ಲೇಕೆ ಇಂಥದ್ದೊಂದು ಇರಲು ಸಾಧ್ಯವಿಲ್ಲ?' ಎಂದು ಪ್ರಶ್ನಿಸಿದ್ದರು. ಅವರು ಹೀಗೆ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಪುಸ್ತಕಗಳೆಂದರೆ ನಮಗೆ ಸರಸ್ವತಿ ಎಂದು ನಾನಾ ರೀತಿಯಲ್ಲಿ ಹಲವರು ಪ್ರತಿಕ್ರಿಯಿಸಿದ್ದರಿಂದ ಸರಸ್ವತಿ ಟ್ರೆಂಡಿಂಗ್ ಆಗಿತ್ತು.
ಇದನ್ನು ಟ್ವೀಟ್ ಮಾಡಲಾದ ಐದೇ ಗಂಟೆಗಳಲ್ಲಿ 290ಕ್ಕೂ ಅಧಿಕ ಮಂದಿ ಇದನ್ನು ರಿಟ್ವೀಟ್ ಮಾಡಿಕೊಂಡಿದ್ದಷ್ಟೇ ಅಲ್ಲದೆ, 160ಕ್ಕೂ ಅಧಿಕ ಮಂದಿ ಕೋಟ್ ಟ್ವೀಟ್ ಮಾಡಿದ್ದು, 2900ಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಹೀಗೊಂದು ಟ್ವೀಟ್ ಹಾಕಿದ್ದ ವ್ಯಕ್ತಿಗೆ ಕೆಲವರು ನೆಗೆಟಿವ್ ಆಗಿ ರಿಪ್ಲೈ ಮಾಡಿದ್ದರೂ ಬಹಳಷ್ಟು ಮಂದಿ ಭಾರತೀಯರು ಯಾಕೆ ಹೀಗೆ ಮಾಡುವುದಿಲ್ಲ ಎಂದು ತಮ್ಮದೇ ಆದ ರೀತಿಯಲ್ಲಿ ವಿವರಿಸಿ ಸರಸ್ವತಿಯನ್ನು ನೆನಪಿಸಿಕೊಳ್ಳುವ ಜತೆಗೆ ಭಾರತೀಯ ಸಂಸ್ಕೃತಿಯ ಮಹತ್ವವನ್ನೂ ಹೇಳಿದ್ದಾರೆ. ಹೀಗೆ ಜನರೆಲ್ಲ ಪ್ರತಿಕ್ರಿಯಿಸಲಾರಂಭಿಸಿದ್ದು, ಟ್ವೀಟ್ ಮಾಡಿದ್ದ ವ್ಯಕ್ತಿ ಪೋಸ್ಟ್ ಮಾಡಿದ್ದ ನಾಲ್ಕು ಗಂಟೆಗಳ ಒಳಗೆ, 'ಪುಸ್ತಕ ಎಂದರೆ ಸರಸ್ವತಿ ಇದ್ದಂತೆ..' ಎಂದು ತಾವೂ ರಿಪ್ಲೈ ಮಾಡಿದ್ದಾರೆ.