ಶ್ರೀನಗರ: ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇರೆಗೆ ಮತ್ತೆ ಆರು ಮಂದಿ ಸರ್ಕಾರಿ ನೌಕರರನ್ನು ಜಮ್ಮು-ಕಾಶ್ಮೀರ ಆಡಳಿತ ವಜಾ ಮಾಡಿದೆ.
ಆರೋಪಿಗಳ ವಿರುದ್ಧ ಯಾವುದೇ ತನಿಖೆ ಇಲ್ಲದೆಯೇ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆಡಳಿತವು ಕ್ರಮ ಕೈಗೊಂಡಿದೆ. ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು, ಇಬ್ಬರು ಶಿಕ್ಷಕರು, ಅರಣ್ಯ ಇಲಾಖೆಯ ಅಧಿಕಾರಿ, ರಸ್ತೆ ಮತ್ತು ಕಟ್ಟಡ ಇಲಾಖೆಯ ನೌಕರ ವಜಾಗೊಂಡವರು.
ನೌಕರರ ವಜಾಕ್ಕೆ ಜಮ್ಮು-ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾ ನೇತೃತ್ವದ ಸಮಿತಿಯು ಹಸಿರು ನಿಶಾನೆ ತೋರಿತ್ತು.
ಜಮ್ಮು-ಕಾಶ್ಮೀರ ಗುಪ್ತಚರ ದಳದ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ ಸ್ಥಾಪನೆಯಾಗಿದ್ದ 'ವಿಶೇಷ ಕಾರ್ಯಪಡೆಯು (ಎಸ್‌ಟಿಎಫ್)' ನೌಕರರು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಪ್ರಕರಣವನ್ನು ಮೆಹ್ತಾ ನೇತೃತ್ವದ ಸಮಿತಿಗೆ ವಹಿಸಿತ್ತು.
ಈ ನೌಕರರನ್ನು ಭಾರತೀಯ ಸಂವಿಧಾನದ 311ನೇ ಆರ್ಟಿಕಲ್ ಅಡಿ ವಿಚಾರಣೆಯಿಲ್ಲದೇ ವಜಾ ಮಾಡಲಾಗಿದೆ.
ಸರ್ಕಾರಿ ನೌಕರರು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುವುದರ ಮೇಲೆ ನಿಗಾ ಇರಿಸಲು ಏಪ್ರಿಲ್‌ನಲ್ಲಿ ಜಮ್ಮು-ಕಾಶ್ಮೀರ ಸರ್ಕಾರ ವಿಶೇಷ ಕಾರ್ಯಪಡೆ ರಚಿಸಿತ್ತು.
ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದಿನ್‌ನ ಮಕ್ಕಳೂ ಸೇರಿದಂತೆ 11 ಮಂದಿಯನ್ನು ಜಮ್ಮು-ಕಾಶ್ಮೀರ ಸರ್ಕಾರವು ಜುಲೈಯಲ್ಲಿ ಸರ್ಕಾರಿ ಸೇವೆಯಿಂದ ವಜಾಗೊಳಿಸಿತ್ತು. ದೇಶ ವಿರೋಧಿ ಚಟುವಟಿಕೆ ಮತ್ತು ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿರುವ ಆರೋಪದಡಿ ಇವರನ್ನು ವಜಾಗೊಳಿಸಲಾಗಿತ್ತು.