ನಮ್ಮ ದಿನನಿತ್ಯದ ಆಹಾರದಲ್ಲಿ ಸರಿಯಾದ ಪ್ರಮಾಣದ ಪ್ರೋಟೀನ್ ಪಡೆಯಲು, ನಮ್ಮಲ್ಲಿ ಬಹಳಷ್ಟು ಜನರು ಪ್ರೋಟೀನ್ ಪೌಡರ್‌ಗಳತ್ತ ಮುಖ ಮಾಡುತ್ತಾರೆ. ಪ್ರತಿನಿತ್ಯ ವ್ಯಾಯಾಮ ಅಥವಾ ಜಿಮ್ ಮಾಡುವವರಲ್ಲಿ ಹೆಚ್ಚಿನವರು ಪ್ರೋಟೀನ್ ಆಧಾರಿತ ಪಾನೀಯಗಳನ್ನು ಸೇವಿಸಿ ತಮ್ಮ ಸ್ನಾಯುಗಳನ್ನು ಬೆಳೆಸಿಕೊಳ್ಳುತ್ತಾರೆ. ಡಯೆಟ್‌ನಲ್ಲಿರುವವರು ಸಹ ಪ್ರೋಟೀನ್ ಪುಡಿಯನ್ನು ಭಾರೀ ಪ್ರಮಾಣದಲ್ಲಿ ಸೇವಿಸುತ್ತಾರೆ. ಈ ಮಧ್ಯೆ ಮಾರುಕಟ್ಟೆಯಲ್ಲಿ ದೊರೆಯುವ ಪ್ರೋಟೀನ್ ಪೌಡರ್‌ಗಳು ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂಬ ಮಾತನ್ನು ಕೇಳಿರುತ್ತೇವೆ.
ಆದರೆ ಕೆಲವು ಪದಾರ್ಥಗಳನ್ನು ಬಳಸಿ ನಿಮ್ಮ ಸ್ವಂತ ಪ್ರೋಟೀನ್ ಪುಡಿಯನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು ಎಂದು ನಿಮಗೆ ತಿಳಿದಿದೆಯೇ? ಮಾರ್ಕೆಟ್ ನಲ್ಲಿ ದೊರೆಯುವ ಪೌಡರ್‌ಗಿಂತ ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಪುಡಿಗಳು ಹೆಚ್ಚು ಪ್ರಯೋಜನಕಾರಿ ಮತ್ತು ತಯಾರಿಸಲು ತುಂಬಾ ಸುಲಭ. ಹಾಗಾದರೆಈ ಆರೋಗ್ಯಕಾರಿ ಪ್ರೋಟೀನ್ ಪುಡಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.
ಮನೆಯಲ್ಲಿ ಪ್ರೋಟೀನ್ ಪೌಡರ್ ತಯಾರಿಸುವುದು ಹೇಗೆ? ಬೇಕಾಗುವ ಪದಾರ್ಥಗಳು: 10-15 ಮಖಾನಾ(ಕಮಲದ ಬೀಜ) 10 ಬಾದಾಮಿ 2 ವಾಲ್ನಟ್ 1 ಟೀಸ್ಪೂನ್ ಸೋಂಪು 1 ಚಮಚ ಕಲ್ಲು ಸಕ್ಕರೆ ಲಕ್ಕಿ - 2 ಕೇಸರಿ -2 ಎಳೆಗಳು ಕರಿಮೆಣಸು - 1 ಪಿಂಚ್ ತಯಾರಿಸುವ ವಿಧಾನ: ಮಖಾನಾ, ಬಾದಾಮಿ, ವಾಲ್ನಟ್‌ಗಳನ್ನ ಬಾಣಲೆಯಲ್ಲಿ ಹುರಿದು, ತಣ್ಣಗಾದ ನಂತರ, ಉಳಿದ ಎಲ್ಲಾ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ ಚೆನ್ನಾಗಿ ಪುಡಿ ಮಾಡಿ, ಒಂದು ಗಾಜಿನ ಪಾತ್ರೆಗೆ ಹಾಕಿಡಿ. ಬೇಕಾದಾಗ 1 ಚಮಚ ಈ ಪುಡಿಯನ್ನು ಒಂದು ಲೋಟ ಹಾಲಿಗೆ ಬೆರೆಸಿ ಕುಡಿಯಿರಿ.
ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಪೌಡರ್ ಕುಡಿಯುವುದರಿಂದ ಆಗುವ ಲಾಭಗಳು: ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಪುಡಿ ವಯಸ್ಸಾದ ಮೇಲೆ ಬರುವ ಬೆನ್ನು ಮತ್ತು ಕೀಲು ನೋವಿಗೆ ಸಹಾಯ ಮಾಡುತ್ತದೆ ಮತ್ತು ದುರ್ಬಲ ದೃಷ್ಟಿ ಹೊಂದಿರುವ ಜನರಿಗೆ ಚೆನ್ನಾಗಿ ಕೆಲಸ ಮಾಡುತ್ತದೆ. ಜೊತೆಗೆ ಈ ಪ್ರೋಟೀನ್ ಪೌಡರ್ ತಯಾರಿಕೆಯಲ್ಲಿ ಬಳಸುವ ಮೂರು ಪ್ರಮುಖ ಪದಾರ್ಥಗಳಾದ ಮಖಾನಾ, ವಾಲ್್ನಟ್ಸ್ ಮತ್ತು ಬಾದಾಮಿ ಸೂಪರ್ ಪದಾರ್ಥಗಳಾಗಿದ್ದು, ಅನೇಕ ರೀತಿಯಲ್ಲಿ ನಮಗೆ ಪ್ರಯೋಜನಕಾರಿ.
ಬಾದಾಮಿ: ಬಾದಾಮಿ ಪೌಷ್ಟಿಕಾಂಶವುಳ್ಳ ಬೀಜವಾಗಿದ್ದು, ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ. 100 ಗ್ರಾಂ ಬಾದಾಮಿಯಲ್ಲಿ ಸುಮಾರು 21.15 ಗ್ರಾಂ ಪ್ರೋಟೀನ್ ಇರುತ್ತದೆ. ಇದು ಕೇವಲ ಪ್ರೋಟೀನ್ ಮಾತ್ರವಲ್ಲದೆ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಇ, ಪೊಟ್ಯಾಸಿಯಮ್, ಮೆಗ್ನೀಶಿಯಂ, ರಂಜಕದಂತಹ ಇತರ ಅನೇಕ ಅಗತ್ಯವಾದ ಜೀವಸತ್ವಗಳು ಮತ್ತು ಪೋಷಕಾಂಶಗಳ ಉತ್ತಮ ಮೂಲವಾಗಿದೆ.ಮಖಾನಾ ಅಥವಾ ಕಮಲದ ಬೀಜ: ಮಖಾನಾಗಳಯ ಆರೋಗ್ಯಕರ ತಿಂಡಿಗಳಲ್ಲಿ ಒಂದು ಎಂದು ನಂಬಲಾಗಿದೆ. ಅವು ಪ್ರೋಟೀನ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕಗಳಿಂದ ಸಮೃದ್ಧವಾಗಿದ್ದು, ಇವೆಲ್ಲವೂ ನಮ್ಮ ದೇಹದ ಆರೋಗ್ಯಕರ ಕಾರ್ಯನಿರ್ವಹಣೆಗೆ ಅಗತ್ಯವಾಗಿವೆ. ಅಲ್ಲದೆ, ಮಖಾನಾಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಅವು ತೂಕ ನಷ್ಟವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ .
ವಾಲ್ನಟ್ಸ್: ವಾಲ್ನಟ್ಸ್ ಕೂಡ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಸುಮಾರು 1/4 ಕಪ್ ವಾಲ್್ನಟ್ಸ್ 4.5 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ವಾಲ್ನಟ್ಸ್ ನಿಮ್ಮ ಹೃದಯಕ್ಕೆ ಉತ್ತಮವಾಗಿದ್ದು, ಅವು ಒಮೆಗಾ 3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ
ಗಮನಿಸಿ: ಈ ಪ್ರೋಟೀನ್ ಪೌಡರ್ ರೆಸಿಪಿಗೆ ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿರದ ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತದೆಯಾದರೂ, ನೀವು ಔಷಧಿ ತೆಗೆದುಕೊಳ್ಳುತ್ತಿದ್ದರೆ ಅಥವಾ ಆರೋಗ್ಯ ಚಿಕಿತ್ಸೆಗೆ ಒಳಗಾಗಿದ್ದರೆ ಅದನ್ನು ಸೇವಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಮನೆಯಲ್ಲಿಯೇ ಪ್ರೋಟೀನ್ ಪೌಡರ್ ತಯಾರಿಸಬಹುದೇ? ಹೌದು, ನೀವೇನಾದರೂ ಪ್ರೋಟೀನ್ ಪೌಡರ್ ಬಳಸಬೇಕೆಂದಿದ್ದರೆ, ಮನೆಯಲ್ಲಿಯೇ ತಯಾರಿಸುವುದು ಹೆಚ್ಚು ಆರೋಗ್ಯಕರ. ಅದನ್ನು ಹೇಗೆ ತಯಾರಿಸಬೇಕು ಎಂಬುದನ್ನು ಮೇಲಿನ ಲೇಖನದಲ್ಲಿ ವಿವರಿಸಲಾಗಿದೆ.