ನವದೆಹಲಿ: 'ಬಾಲಾಕೋಟ್ ಮತ್ತು ಗಾಲ್ವನ್ ಕಣಿವೆಯಲ್ಲಿ ಭಾರತ ಕೈಗೊಂಡಿದ್ದ ಕ್ರಮವು ಅತಿಕ್ರಮಣಕಾರರಿಗೊಂದು ಸ್ಪಷ್ಟ ಸಂದೇಶ ಕಳುಹಿಸಿದೆ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟುಮಾಡಲು ಯತ್ನಿಸಿದರೆ ತ್ವರಿತ ಮತ್ತು ತಕ್ಕ ಉತ್ತರ ನೀಡಲಾಗುವುದು ಎಂಬ ಸಂದೇಶವನ್ನು ಕಳುಹಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಗಡಿ ಪ್ರದೇಶಗಳಲ್ಲಿ ನಾವು ಯಥಾಸ್ಥಿತಿಗೆ ಸವಾಲೊಡ್ಡುವ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಸಮಸ್ಯೆ ಎದುರಿಸುತ್ತಿದ್ದೇವೆ. ಇದರ ನಡುವೆಯೂ ನೆರೆಹೊರೆಯ ರಾಷ್ಟ್ರಗಳ ಜತೆ ಸದ್ಭಾವನೆ ಹೆಚ್ಚಿಸುವ ಪ್ರಯತ್ನಗಳಲ್ಲಿ ನಿರತರಾಗಿದ್ದೇವೆ ಎಂದು ಹೇಳಿದ್ದಾರೆ.
ಗಾಲ್ವನ್ ಕಣಿವೆ ಪ್ರದೇಶದಲ್ಲಿ 2020ರ ಜೂನ್ 15ರಂದು ಚೀನಾ ಸೇನೆಯು ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಮುಂದಾಗಿತ್ತು. ಆಗ ಸಂಭವಿಸಿದ್ದ ಘರ್ಷಣೆಯಲ್ಲಿ ಭಾರತೀಯ ಸೇನೆಯು ಅಧಿಕಾರಿಯೊಬ್ಬರು ಸೇರಿದಂತೆ 20 ಮಂದಿಯನ್ನು ಕಳೆದುಕೊಂಡಿತ್ತು. ಚೀನಾದ ನಾಲ್ವರು ಯೋಧರು ಮೃತಪಟ್ಟಿದ್ದಾರೆ ಎನ್ನಲಾಗಿತ್ತು.
ಜಮ್ಮು-ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಮೃತಪಟ್ಟ ಘಟನೆಗೆ ಪ್ರತೀಕಾರವಾಗಿ 2019ರ ಫೆಬ್ರುವರಿ 26ರಂದು ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆ ದಾಟಿ ಬಾಲಾಕೋಟ್‌ಗೆ ಮುನ್ನುಗ್ಗಿ ಉಗ್ರರ ಶಿಬಿರಗಳನ್ನು ನಾಶಪಡಿಸಿದ್ದವು.
ಅಮೆರಿಕದಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆ ಕುರಿತಂತೆ ಕ್ವಾಡ್ ಸಭೆ ಆರಂಭಕ್ಕೂ ಕೆಲ ಗಂಟೆಗಳ ಮುನ್ನ ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯ ಸೇನಾ ಸಂಘರ್ಷದ ಕುರಿತಂತೆ ವಾಕ್ ಸಮರ ನಡೆದಿತ್ತು. ಸಂಘರ್ಷಕ್ಕೆ ಭಾರತೀಯ ಸೇನೆ ಕಾರಣ ಎಂದು ಚೀನಾ ದೂಷಿಸಿದ್ದು, ಭಾರತ ಆರೋಪಗಳನ್ನು ಅಲ್ಲಗಳೆದಿತ್ತು. ಈ ಬೆಳವಣಿಗೆ ಮಧ್ಯೆಯೇ ರಾಜನಾಥ್ ಸಿಂಗ್ ಅವರು ಗಾಲ್ವನ್ ಕಣಿವೆ ಸಂಘರ್ಷ ಮತ್ತು ಬಾಲಾಕೋಟ್ ದಾಳಿ ವಿಚಾರವನ್ನು ಸಮರ್ಥಿಸಿಕೊಂಡಿದ್ದಾರೆ.