ತಿರುವನಂತಪುರ: ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ ಖಂಡಿಸಿ ಸೆ. 27ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಹರತಾಳದ ಹಿನ್ನೆಲೆಯಲ್ಲಿ ಕೇರಳದಲ್ಲಿ ಕೆಎಸ್ಸಾರ್ಟಿಸಿ ಬಸ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಬಹುತೇಕ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಚಾಲಕರು-ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗುವುದು ಸಂಶಯವೆನಿಸಿದೆ. ಸಂಯುಕ್ತ ಮುಷ್ಕರ ಸಮಿತಿ ವತಿಯಿಂದ ಕೇರಳದಲ್ಲಿ ಸೆ. 27ರಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಹರತಾಳ ನಡೆಯಲಿದೆ.
ಮೋಟಾರು ವಾಹನ ಕಾರ್ಮಿಕರು, ಕೃಷಿಕರು, ಬ್ಯಾಂಕ್ ಸಿಬ್ಬಂದಿ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಭಾರತ ಬಂದ್ನಲ್ಲಿ ಪಾಲ್ಗೊಳ್ಳಲಿದೆ. ನಿತ್ಯೋಪಯೋಗಿ ಸಾಮಗ್ರಿ, ಇಂಧನ ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆ, ಕೃಷಿಕರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಕೃಷಿಕರಿಗೆ ಮಾರಕವಾಗಿರುವ ಕೃಷಿ ಕಾನೂನು ಹಾಗೂ ಉದ್ಯೋಗ ಕಾನೂನು ತಿದ್ದುಪಡಿ ವಿಧೇಯಕ ಹಿಂತೆಗೆಯಬೇಕು, ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ತಡೆಗಟ್ಟಬೇಕು ಮುಂತಾದ ಬೇಡಿಕೆ ಮುಂದಿರಿಸಿ ಹರತಾಳ ನಡೆಯಲಿದೆ.