ಭೋಪಾಲ್: ಆರ್ ಎಸ್ ಎಸ್ ನ ಶಾಲೆಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ, ರಾಜ್ಯಸಭೆ ಸಂಸದ ದಿಗ್ವಿಜಯ್ ಸಿಂಗ್ ಅವರಿಗೆ ಮಧ್ಯಪ್ರದೇಶದ ಬಿಜೆಪಿ ವಕ್ತಾರ ಪಂಕಜ್ ಚತುರ್ವೇದಿ ಕಾನೂನು ನೊಟೀಸ್ ಜಾರಿಗೊಳಿಸಿದ್ದಾರೆ.
ಮಧ್ಯಪ್ರದೇಶದ ಮಾಜಿ ಸಿಎಂ ಸಿಂಗ್, ಆರ್ ಎಸ್‌ಎಸ್ ನಡೆಸುತ್ತಿರುವ ಸರಸ್ವತಿ ಶಿಶು ಮಂದಿರ ಶಾಲೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು ಈ ಹೇಳಿಕೆಗೆ ಖಂಡನೆ ವ್ಯಾಪಕವಾಗಿ ವ್ಯಕ್ತವಾಗಿತ್ತು.
ಲೀಗಲ್ ನೊಟೀಸ್ ಕಳಿಸಿರುವ ಪಂಕಜ್ ಚತುರ್ವೇದಿ, "ತಾವು ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳಿ, ಇಲ್ಲವೇ ಕಾನೂನು ಕ್ರಮ ಎದುರಿಸಿ ಎಂದು ಎಚ್ಚರಿಸಲಾಗಿದೆ.
"ದೇಶದ ಉದ್ದಗಲಕ್ಕೂ ಹರಡಿಕೊಂಡಿರುವ ಸರಸ್ವತಿ ಶಿಶು ಮಂದಿರಗಳ ಬಗ್ಗೆ ದಿಗ್ವಿಜಯ್ ಸಿಂಗ್ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೇಳಲಿ" ಎಂದು ಪಂಕಜ್ ಚತುರ್ವೇದಿ ಆಗ್ರಹಿಸಿದ್ದು ತಮ್ಮ ವಕೀಲರಾದ ಪ್ರಮೋದ್ ಸಕ್ಸೇನಾ ಮೂಲಕ ನೊಟೀಸ್ ಕಳಿಸಿದ್ದಾರೆ.
ಆರ್ ಎಸ್‌ಎಸ್ ನಡೆಸುತ್ತಿರುವ ಸರಸ್ವತಿ ಶಿಶು ಮಂದಿರ-ಶಾಲೆಗಳ ಜಾಲಗಳು ದೇಶದಲ್ಲಿ ಕೋಮು ಕಹಿ ಹರಡುವುದಕ್ಕೆ ಕಾರಣವಾಗಿದೆ. ಈ ಸಂಸ್ಥೆಗಳು ಯುವ ಮನಸ್ಸುಗಳಲ್ಲಿ ದ್ವೇಷದ ಬೀಜವನ್ನು ಬಿತ್ತುತ್ತಿವೆ" ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದರು.
ಇನ್ನು ಬುಧವಾರದಂದು ಮಾತನಾಡಿರುವ ದಿಗ್ವಿಜಯ್ ಸಿಂಗ್ ರಾಜಕಾರಣಿಗಳು ರಾಜಕೀಯ ಪ್ರಪಂಚದಲ್ಲಿ ಬದುಕಿ ಉಳಿಯಬೇಕಾದರೆ ದಪ್ಪ ಚರ್ಮ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.