ಜಮ್ಮು : ಜಮ್ಮುವಿನಲ್ಲಿ 100 ರಿಲಯನ್ಸ್ ಮಾಲೀಕತ್ವದ ಸ್ಟೋರ್‍ಗಳನ್ನು ತೆರೆಯುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಜಮ್ಮು ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಬುಧವಾರ ಮುಷ್ಕರಕ್ಕೆ ಕರೆ ನೀಡಿದೆ.
ಜಮ್ಮುವಿನ ವರ್ತಕರೊಂದಿಗೆ ಕೇಂದ್ರ ಸರಕಾರ ಗರಿಷ್ಠ ಮಟ್ಟದ ತಾರತಮ್ಯ ನಡೆಸುತ್ತಿದೆ ಎಂಬುದನ್ನು ಅದರ ಈ ನಡೆ ಸೂಚಿಸುತ್ತದೆ ಎಂದು ಚೇಂಬರ್ ಅಧ್ಯಕ್ಷ ಅರುಣ್ ಗುಪ್ತಾ ಹೇಳಿದ್ದಾರೆ.
ಇಂತಹ ದೊಡ್ಡ ಮಳಿಗೆಗಳು ಜಮ್ಮುವಿನಲ್ಲಿ ಆರಂಭಗೊಂಡರೆ ಅಲ್ಲಿನ ಸಣ್ಣ ಅಂಗಡಿಗಳು ಮುಚ್ಚಬೇಕಾದೀತು ಎಂದು ಅವರು ಭೀತಿ ವ್ಯಕ್ತಪಡಿಸಿದ್ದಾರೆ. ``ಯಾವುದೇ ನಿರ್ದಿಷ್ಟ ಗುರಿಯಿಲ್ಲದ ಸರ್ಕಾರ ವರ್ತಕರ ಕೈಯ್ಯಲ್ಲಿರುವುದನ್ನು ಸೆಳೆದಿದೆ. ಇದು ಅಸ್ವೀಕಾರಾರ್ಹ,'' ಎಂದು ಅವರು ಹೇಳಿದರು.
ಸರ್ಕಾರ ಮದ್ಯ ಮಳಿಗೆಗಳ ಇ-ಆಕ್ಷನ್ ಆರಂಭಿಸಿದ ನಂತರ ಇಲ್ಲಿನ 228 ವೈನ್ ವರ್ತಕರಿಗೆ ಕೆಲಸವಿಲ್ಲದಂತಾಗಿದೆ. ನವೀಕೃತ ಲೈಸನ್ಸ್ ಹಾಗೂ ಇಪ್ಪತ್ತಕ್ಕೂ ಅಧಿಕ ಇಲಾಖೆಗಳು ನೀಡುವ ನಿರಾಕ್ಷೇಪಣಾ ಪತ್ರಗಳನ್ನು ಅಬಕಾರಿ ಇಲಾಖೆ ಕೇಳುತ್ತಿರುವುದರಿಂದ ಬಾರ್‍ಗಳೂ ಮುಚ್ಚಿವೆ ಎಂದು ಅವರು ದೂರಿದ್ದಾರೆ.
ಆಗಸ್ಟ್ 2019ರಲ್ಲಿ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿದ ನಂತರ ಇದೇ ಮೊದಲ ಬಾರಿ ವರ್ತಕರು ಮುಷ್ಕರಕ್ಕೆ ಕರೆನೀಡಿದ್ದಾರೆ.