ನವದೆಹಲಿ: ಕಳೆದೆರಡು ವರ್ಷಗಳಿಂದ ಬಹುತೇಕ ಕಂಪೆನಿಗಳು ಅದರಲ್ಲಿಯೂ ಐಟಿ-ಬಿಟಿಗಳು ಕರೊನಾ ಕಾರಣದಿಂದ ತಮ್ಮ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡಲು (ವರ್ಕ್ ಫ್ರಂ ಹೋಮ್) ಕೊಟ್ಟಿದೆ. ಆದ್ದರಿಂದ ಕಚೇರಿಯ ಮುಖ ಕಾಣದೇ ಹಲವರು ಎರಡು ವರ್ಷಗಳಾಗುತ್ತಲೇ ಬಂದಿದೆ.
ಸಹೊದ್ಯೋಗಿಗಳ ಜತೆ ಖುಷಿಯಲ್ಲಿ ಕಾಲ ಕಳೆಯುತ್ತಿದ್ದ, ಬೇಕೆಂದಾಗಲೆಲ್ಲಾ ಎನ್‌ಜಾಯ್ ಮಾಡುತ್ತಿದ್ದ, ಪಾರ್ಟಿ, ಫಂಕ್ಷನ್ ಎಂದು ಸ್ನೇಹಿತರ ಜತೆ ತಿರುಗಾಡುತ್ತಿದ್ದ ಬಹುತೇಕ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಎನ್ನುವುದು ನುಂಗಲಾಗದ ತುತ್ತಾಗಿದೆ ಎನ್ನುವುದು ಇದೀಗ ಗುಟ್ಟಾಗಿ ಉಳಿದಿಲ್ಲ. ಇದು ಒಂದೆಡೆಯಾದರೆ, ಗಂಡ ಮನೆಯಲ್ಲಿ ಕೆಲಸ ಮಾಡುತ್ತಿರುವ ಕಾರಣ, ಅವರಿಗೆ ಬೇಕು ಬೇಕೆಂದಾಗಲೆಲ್ಲಾ ಕಾಫಿ, ಟೀ, ತಿನಿಸು ನೀಡುವ ಸ್ಥಿತಿ ಗೃಹಿಣಿಯರಿಗೆ ಬಂದಿದ್ದು, ಯಾವಾಗ ಗಂಡ ಕಚೇರಿಗೆ ಹೋಗುತ್ತಾನೋ ಎನ್ನುವ ಸ್ಥಿತಿ ಉಂಟಾಗಿದೆ. ದಿನಪೂರ್ತಿ ದಂಪತಿ ಒಟ್ಟಿಗೇ ಇರುವ ಕಾರಣದಿಂದ ಎಷ್ಟೋ ಕುಟುಂಬಗಳ ಸಾಮರಸ್ಯ ಕೂಡ ಹದಗೆಟ್ಟಿದೆ ಎನ್ನುವ ವರದಿಗಳೂ ಸಾಕಷ್ಟು ಬಂದಿವೆ.
ಇದರ ನಡುವೆಯೇ ಇದೀಗ ಪತ್ನಿಯೊಬ್ಬರು ತನ್ನ ಗಂಡನ ಬಾಸ್‌ಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅವರ ಬರೆದಿರುವುದು ಏನೆಂದರೆ, 'ನನ್ನ ಪತಿ ಎರಡು ಡೋಸ್ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ಅವರ ವರ್ಕ್ ಫ್ರಂ ಹೋಮ್ ಕೆಲಸವನ್ನು ದಯವಿಟ್ಟು ಸ್ಟಾಪ್ ಮಾಡಿ. ಅವರನ್ನು ವಾಪಸ್ ಕಚೇರಿಗೆ ಕರೆಸಿಕೊಳ್ಳಿ. ಅವರು ಮನೆಯಲ್ಲಿ ಇದ್ದರೆ ನನ್ನ ಸಂಸಾರ ಹಾಳಾಗುವ ಸಾಧ್ಯತೆ ಇದೆ. ನನಗೆ ಇದಾಗಲೇ ಎರಡು ಮಕ್ಕಳಿದ್ದಾರೆ, ನನ್ನ ಸಂಸಾರವನ್ನು ಉಳಿಸುವುದು ನಿಮ್ಮ ಕೈಯಲ್ಲಿದೆ ಎಂದು ಮನವಿ ಮಾಡಿದ್ದಾರೆ.
ಪತಿಗೆ ಇದಾಗಲೇ ಎರಡು ಡೋಸ್ ಲಸಿಕೆ ನೀಡಿದ್ದು, ಅವರು ಕರೊನಾ ನಿಯಮವನ್ನು ಫಾಲೋ ಮಾಡ್ತಾರೆ. ಮನೆಯಲ್ಲಿ ಇದ್ದರೆ ಅವರು ದಿನಕ್ಕೆ ಹತ್ತು ಬಾರಿ ಚಹ ಮಾಡಿಕೊಡಲು ಕೇಳುತ್ತಾರೆ. ಮನೆಯಲ್ಲಿ ಇರುವ ಕೋಣೆಯಲ್ಲಿ ಹೋಗಿ ಕಚೇರಿ ಕೆಲಸ ಮಾಡುತ್ತಾರೆ. ಆ ಕೋಣೆಯನ್ನು ನೋಡಲು ಆಗುತ್ತಿಲ್ಲ. ಸಿಕ್ಕಾಪಟ್ಟೆ ಗಲೀಜು ಮಾಡ್ತಾರೆ. ಕೆಲಸ ಮಾಡುವ ನಡುವೆಯೇ ನಿದ್ರೆಗೆ ಜಾರಿ ಬಿಡುತ್ತಾರೆ. ನನಗೆ ಈಗಲೇ ನೋಡಿಕೊಳ್ಳೋದಕ್ಕೆ ಎರಡು ಮಕ್ಕಳಿದ್ದಾರೆ. ಇನ್ನಷ್ಟು ದಿನ ವರ್ಕ್ ಫ್ರಂ ಹೋಮ್ ಮುಂದುವರೆದರೆ ನಮ್ಮ ದಾಂಪತ್ಯ ಜೀವನ ಹಾಳಾಗುತ್ತೆ ಎಂದಿದ್ದಾರೆ.
ಪತ್ನಿ ಬರೆದಿರುವ ಈ ಪತ್ರವನ್ನು ಹರ್ಷಾ ಗೋಯಂಕ ಎಂಬುವವರು ಶೇರ್ ಮಾಡಿಕೊಂಡಿದ್ದು, ಈ ಪತ್ನಿಯ ಪತ್ರಕ್ಕೆ ಹೇಗೆ ರಿಯಾಕ್ಷನ್ ಕೊಡಲಿ ಎಂದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಇಲ್ಲಿದೆ ನೋಡಿ ಪತ್ನಿ ಬರೆದಿರುವ ಪತ್ರ