ತ್ರಿಶೂರ್: ತಮಗೆ ವಿವಾಹವಾಗಲು ಹೆಣ್ಣು ಅಥವಾ ಗಂಡನ್ನು ಹುಡುಕಲು ಹಲವಾರು ಮಂದಿ ಬ್ರೋಕರ್‌ಗಳ ಸಹಾಯ ಪಡೆಯುತ್ತಾರೆ ಅಥವಾ ವಿವಾಹಕ್ಕೆ ಸಂಬಂಧಿಸಿ ಆಪ್‌ಗಳನ್ನು ಕೂಡಾ ಅವಲಂಭಿಸುತ್ತಾರೆ. ಆದರೆ ಕೇರಳದ ವಲಚ್ಚಿರದ 33 ವರ್ಷ ಪ್ರಾಯದ ಯುವಕರೊಬ್ಬರು ಯಾವುದೇ ಮಧ್ಯವರ್ತಿಗಳ ಸಹಾಯ ಪಡೆಯದೆಯೇ ತಮ್ಮ ಜೀವನ ಸಂಗಾತಿಯನ್ನು ಹುಡುಕುವ ಯತ್ನ ಮಾಡುತ್ತಿದ್ದಾರೆ. ಇದಕ್ಕೆಂದು ತಮ್ಮ ಅಂಗಡಿಯ ಎದುರು ಬೋರ್ಡ್ ಹಾಕಿದ್ದಾರೆ.
ಕೇರಳದ ವಲಚ್ಚಿರದ 33 ವರ್ಷ ಪ್ರಾಯದ ಯುವಕ ಎನ್ ಎನ್ ಉನ್ನಿಕೃಷ್ಣನ್, ತಮ್ಮ ಅಂಗಡಿಯ ಎದುರು ವಧು ಅನ್ವೇಷಣೆಗೆ ಬೋರ್ಡ್ ಹಾಕಿದ್ದಾರೆ. "ಜೀವನ ಸಂಗಾತಿ ಬೇಕಾಗಿದ್ದಾರೆ. ಜಾತಿ ಅಥವಾ ಧರ್ಮ ಯಾವುದು ಆದರೂ ಆಗುತ್ತದೆ" ಎಂದು ಬೋರ್ಡ್‌ನಲ್ಲಿ ಬರೆಯಲಾಗಿದೆ.
ಈ ಬೋರ್ಡ್ ಅನ್ನು ಎನ್ ಎನ್ ಉನ್ನಿಕೃಷ್ಣನ್‌ನ ಸ್ನೇಹಿತರೊಬ್ಬರು ಈ ಬೋರ್ಡ್‌ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದು ಭಾರೀ ವೈರಲ್ ಆಗಿದೆ. ಈ ಬೋರ್ಡ್‌ನ ಫೋಟೋ ನೋಡಿ ಉನ್ನಿಕೃಷ್ಣನ್‌ಗೆ ಆಸ್ಟೇಲಿಯಾ, ಇಂಗ್ಲೆಂಡ್‌ನಿಂದಲೂ ಕರೆಗಳು ಬಂದಿದೆ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬೋರ್ಡ್‌ನ ಫೋಟೋ ವೈರಲ್ ಆಗುತ್ತಿರುವ ನಡುವೆಯೂ ಉನ್ನಿಕೃಷ್ಣನ್ ಮಾತ್ರ ತಮ್ಮ ಮನೆಯ ಹತ್ತಿರದ ಅಂಗಡಿಯೊಂದರಲ್ಲಿ ತಮಗೆ ಬಂದಿರುವ ಎಲ್ಲಾ ಮದುವೆಯ ಪ್ರಸ್ತಾವವನ್ನು ಪರಿಶೀಲನೆ ಮಾಡುವುದರಲ್ಲೇ ಬಿಝಿ ಆಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉನ್ನಿಕೃಷ್ಣನ್, "ನಾನು ದಿನಗೂಲಿ ಕಾರ್ಮಿಕನಾಗಿದ್ದೆ. ನನ್ನ ತಲೆಯಲ್ಲಿ ಗೆಡ್ಡೆ ಇದ್ದ ಕಾರಣ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ನನ್ನ ಎಲ್ಲಾ ಆರೋಗ್ಯ ಸಮಸ್ಯೆಗಳು ಗುಣಮುಖವಾಗುತ್ತಿದ್ದಂತೆ ನಾನು ಜೀವನದಲ್ಲಿ ಸೆಟೆಲ್ ಆಗಬೇಕು ಎಂದು ನಿರ್ಧಾರ ಮಾಡಿದೆ. ಈ ಕಾರಣದಿಂದಾಗಿ ನಾನು ಫೆಬ್ರವರಿಯಲ್ಲಿ ನನ್ನ ನಿವಾಸದ ಬಳಿಯೇ ಲಾಟರಿ ಅಂಗಡಿಯನ್ನು ತೆರೆದೆ. ಬಳಿಕ ನಾನು ಚಹಾದ ಸಣ್ಣ ಅಂಗಡಿಯನ್ನು ತೆರೆದೆ ಅದರಲ್ಲಿಯೂ ವ್ಯವಹಾರ ಉತ್ತಮವಾಗಿದೆ. ಈಗ ನನಗೆ ಜೀವನ ಸಂಗಾತಿ ಬೇಕು ಎಂದು ಅನಿಸಿದೆ," ಎಂದು ಹೇಳಿದ್ದಾರೆ.
"ನನಗೆ ಜೀವನ ಸಂಗಾತಿ ಬೇಕು. ಆದರೆ ನಾನು ಬ್ರೋಕರ್‌ಗಳ ಮೂಲಕ ಜೀವನ ಸಂಗಾತಿಯನ್ನು ಹುಡುಕುವುದು ನನಗೆ ಇಷ್ಟವಿಲ್ಲ. ಹಾಗೆಯೇ ಹುಡುಗಿಯ ಜಾತಕ ಸರಿಯಾಗಿ ಹೊಂದುತ್ತದೆಯೇ ಎಂದು ನೋಡಿಕೊಂಡು ವಿವಾಹವಾಗುವುದು ಕೂಡಾ ನನಗೆ ಇಷ್ಟವಿಲ್ಲ. ನನಗೆ ಹುಡುಗಿಯನ್ನು ನನ್ನ ಕುಟುಂಬಸ್ಥರು ಹಾಗೂ ಸ್ನೇಹಿತರು ಹುಡುಕಿದ್ದಾರೆ. ಆದರೆ ಯಾವುದೂ ಸರಿಯಾಗಲಿಲ್ಲ. ಆದ್ದರಿಂದ ನಾನು ನನ್ನ ಚಹಾದ ಅಂಗಡಿಯ ಎದುರು ಬೋರ್ಡ್ ಹಾಕುವ ನಿರ್ಧಾರವನ್ನು ಮಾಡಿಕೊಂಡೆ," ಎಂದು ತಿಳಿಸಿದ್ದಾರೆ.
ಉನ್ನಿಕೃಷ್ಣನ್‌ರ ಸ್ನೇಹಿತ ಸಾಜಿ ಎಡಪಳ್ಳಿ ಉನ್ನಿಕೃಷ್ಣನ್ ತನ್ನ ಅಂಗಡಿಯ ಎದುರು ಹಾಕಿರುವ ಬೋರ್ಡ್‌ನ ಫೋಟೋ ತೆಗೆದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ಈ ಹಿನ್ನೆಲೆ, "ವಿದೇಶದಲ್ಲಿರುವ ಮಲಯಾಳಿಗರು ಕೂಡಾ ನನಗೆ ಕರೆ ಮಾಡಿದ್ದಾರೆ," ಎಂದು ಉನ್ನಿಕೃಷ್ಣನ್ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಉನ್ನಿಕೃಷ್ಣನ್ ಜೊತೆ ವಿವಾಹ ಸಂಬಂಧ ಕುದುರಿಸಿಕೊಳ್ಳುವ ನೆಪದಲ್ಲಿ ಮಾತ್ರವಲ್ಲದೇ ಇನ್ನು ಹಲವಾರು ಮಂದಿ ಉನ್ನಿಕೃಷ್ಣನ್‌ಗೆ ಉತ್ತಮ ಭವಿಷ್ಯವನ್ನು ಹಾರೈಸಲು ಕರೆ ಮಾಡಿದ್ದಾರೆ. ಇನ್ನು ಹಲವಾರು ಮಂದಿ ಯಾವುದೇ ಜಾತಿ ಹಾಗೂ ಧರ್ಮಕ್ಕೆ ಸೇರಿದ ಯುವತಿ ಆಗುತ್ತದೆ ಎಂದು ಬೋರ್ಡ್‌ನಲ್ಲಿ ಹಾಕಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಓರ್ವ ವ್ಯಕ್ತಿಯು ಜೀವನ ಸಂಗಾತಿಯನ್ನು ಹುಡುಕಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಕ್ಕೆ ಉನ್ನಿಕೃಷ್ಣನ್‌ಗೆ ಕರೆ ಮಾಡಿ ಬೈದಿದ್ದಾರೆ ಎಂದು ತಿಳಿದು ಬಂದಿದೆ.
"ಈ ನಡುವೆ ಈಗ ನನಗೆ ಕರೆಗಳಿಗೆ ಪ್ರತಿಕ್ರಿಯೆ ನೀಡುವಷ್ಟು ಪುರುಸೋತು ಇಲ್ಲದಂತೆ ಆಗಿದೆ. ಹಲವಾರು ಮಂದಿ ಕರೆ ಮಾಡುತ್ತಿದ್ದಾರೆ," ಎಂದು ಹೇಳಿದ್ದಾರೆ. ಇನ್ನು ಬ್ರೋಕರ್‌ಗಳ ಸಹವಾಸ ಬೇಡ ಎಂದು ತಮ್ಮ ಚಹಾದ ಅಂಗಡಿಯ ಬಳಿ ವಧು ಅನ್ವೇಷಣೆಯ ಬೋರ್ಡ್ ಹಾಕಿರುವ ಉನ್ನಿಕೃಷ್ಣನ್‌ಗೆ ಬ್ರೋಕರ್‌ಗಳೇ ಕರೆ ಮಾಡಿ ಎಲ್ಲಾ ವಿವರ ನೀಡಿ ನಾವು ನಿಮಗೆ ಹೆಣ್ಣು ಹುಡುಕುತ್ತೇವೆ ಎಂದಿದ್ದಾರೆ. "ನಾನು ಈ ಸಂದರ್ಭದಲ್ಲಿ ನನ್ನ ವೈಯಕ್ತಿಕ ಮಾಹಿತಿಯನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹಾಕವುವುದಿಲ್ಲ, ಬ್ರೋಕರ್‌ಗಳಿಗೆ ನೀಡುವುದಲ್ಲ ಎಂದಿದ್ದೇನೆ," ಉನ್ನಿಕೃಷ್ಣನ್ ಹೇಳಿದ್ದಾರೆ.