ತಿರುವನಂತಪುರಂ: ಆನ್‍ಲೈನ್ ಗೇಮಿಂಗ್ ವ್ಯಸನಿಯಾಗಿರುವ ಮಕ್ಕಳಿಗಾಗಿ ವಿಶೇಷ ಡಿ-ಅಡಿಕ್ಷನ್ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ರಾಜ್ಯದಲ್ಲಿ ಪೋಲೀಸರಿಗಾಗಿ ನಿರ್ಮಿಸಲಾದ ಕಟ್ಟಡಗಳನ್ನು ನಿನ್ನೆ ಆನ್‍ಲೈನ್‍ನಲ್ಲಿ ಉದ್ಘಾಟಿಸಿ ಅವರು ಹೇಳಿದರು.
ರಾಜ್ಯದ ಇನ್ನೂ 20 ಪೋಲೀಸ್ ಠಾಣೆಗಳನ್ನು ಮಕ್ಕಳ ಸ್ನೇಹಿ ಠಾಣೆಗಳನ್ನಾಗಿ ಪರಿವರ್ತಿಸಲಾಗಿದೆ. ಇದರೊಂದಿಗೆ ಮಕ್ಕಳ ಸ್ನೇಹಿ ಪೋಲೀಸ್ ಠಾಣೆಗಳ ಸಂಖ್ಯೆ 126 ಕ್ಕೆ ಏರಿದೆ. ಕಳೆದ ಐದು ವರ್ಷಗಳಲ್ಲಿ ಪೋಲೀಸರಿಗೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ದೊಡ್ಡ ಸಾಧನೆ ಮಾಡಲಾಗಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು. ಬೆರಳೆಣಿಕೆಯಷ್ಟು ಪೋಲೀಸ್ ಠಾಣೆಗಳಿಗೆ ಮಾತ್ರ ಸ್ವಂತ ಕಟ್ಟಡವಿಲ್ಲ. ಇವುಗಳಿಗಾಗಿ ಕಟ್ಟಡವನ್ನು ಆದಷ್ಟು ಬೇಗ ನಿರ್ಮಿಸಲಾಗುವುದು. ಅನುಕರಣೀಯ ಕೆಲಸದ ಮೂಲಕ ಪೋಲೀಸರು ಸಾರ್ವಜನಿಕ ಸೇವೆಯ ವಿಶೇಷ ಮುಖವಾಗಲು ಸಾಧ್ಯವಾಗಿದೆ ಎಂದು ಸಿಎಂ ಹೇಳಿದರು.
ಹೊಸ ಪೋಲೀಸ್ ಠಾಣೆಗಳು ಪೂಜಾಪುರ, ವಿಜಿಂಜಮ್, ಕೊಟ್ಟಾಯಂ ಈಸ್ಟ್, ಕುಮಾರಕಂ, ಕುರವಿಲಂಗಾಡ್, ಗಾಂಧಿನಗರ, ಕರುಕಾಚಲ್, ತ್ರಿಶೂರ್ ವೆಸ್ಟ್, ಪೆರಮಂಗಲಂ, ಮಣ್ಣುತಿ, ತ್ರಿಶೂರ್ ನಗರ ಮಹಿಳಾ ಪೋಲೀಸ್ ಠಾಣೆ, ಕೊಡುಂಗಲ್ಲೂರ್, ತಿರೂರ್, ಉಳಿಕ್ಕಲ್, ಅರಳಂ, ಕುಂಬಳೆ, ವಿದ್ಯಾನಗರ, ಅಂಬಲತ್ತರ, ಬೇಡಗಂ ಮತ್ತು ಬೇಕಲ್ ಕೇಂದ್ರಗಳಲ್ಲಿ ಆರಂಭಿಸಲಾಗಿದೆ.
ಆನ್‍ಲೈನ್ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಪೋಲೀಸ್ ಮುಖ್ಯಸ್ಥ ಅನಿಲ್ ಕಾಂತ್, ಎಡಿಜಿಪಿಗಳಾದ ವಿಜಯ್ ಎಸ್ ಸಖ್ರೆ ಮತ್ತು ಮನೋಜ್ ಅಬ್ರಹಾಂ ಮತ್ತು ಪೋಲಿಸ್ ಹೆಡ್ಕ್ವಾರ್ಟರ್ಸ್ ಡಿಐಜಿ ಎಸ್ ಶ್ಯಾಮಸುಂದರ್ ಉಪಸ್ಥಿತರಿದ್ದರು.