ನವದೆಹಲಿ: ಕೋವಿಡ್ ಪಿಡುಗು ಹಾಗೂ ಇದೇ ಕಾರಣಕ್ಕೆ ಲಾಕ್‌ಡೌನ್ ಜಾರಿಗೊಳಿಸಿದ ಪರಿಣಾಮ ಕಳೆದ ವರ್ಷ ಕಳ್ಳತನ, ದರೋಡೆ ಹಾಗೂ ಮಕ್ಕಳು-ಮಹಿಳೆಯರ ಮೇಲೆ ದೌರ್ಜನ್ದದಂತಹ ಅಪರಾಧಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ.
ಇನ್ನೊಂದೆಡೆ, ಕೋವಿಡ್-19 ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಮಾರ್ಗಸೂಚಿಗಳ ಉಲ್ಲಂಘನೆ ಸೇರಿದಂತೆ ಸರ್ಕಾರದ ಆದೇಶಗಳ ಪಾಲನೆ ಮಾಡದಿರುವಂಥ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊ (ಎನ್‌ಸಿಆರ್‌ಬಿ) ವರದಿಯಲ್ಲಿ ವಿವರಿಸಲಾಗಿದೆ.
'ಕ್ರೈಮ್ ಇನ್ ಇಂಡಿಯಾ-2020' ಎಂಬ ವರದಿ ಬಿಡುಗಡೆ ಮಾಡಿರುವ ಎನ್‌ಸಿಆರ್‌ಬಿ, ದೇಶದಲ್ಲಿ ದಾಖಲಾದ ವಿವಿಧ ರೀತಿಯ ಅಪರಾಧಗಳ ಕುರಿತು ಮಾಹಿತಿ ನೀಡಿದೆ.
ಕಳೆದ ವರ್ಷ ಒಟ್ಟು 66,01,285 ಅಪರಾಧ ಕೃತ್ಯಗಳು ದಾಖಲಾಗಿವೆ. 2019ಕ್ಕೆ ಹೋಲಿಸಿದರೆ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಶೇ 28ರಷ್ಟು (14,45,127) ಹೆಚ್ಚಳ ಕಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಮಹಿಳೆಯರ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿ ಒಟ್ಟು 3,71,503 ಪ್ರಕರಣಗಳು ದಾಖಲಾಗಿವೆ. 2019ರಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಹೋಲಿಸಿದರೆ (4,05,326) ಶೇ 8.3ರಷ್ಟು ಇಳಿಕೆ ಕಂಡುಬಂದಿದೆ.
ಮಕ್ಕಳ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿ 1,28,531 ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 13.2ರಷ್ಟು ಇಳಿಕೆ ಕಂಡುಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.