ನವದೆಹಲಿ : ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನ ಸಾಮಾನ್ಯರಿಗೆ ಆದ್ಯತೆ ನೀಡಬೇಕಾದ ಅಗತ್ಯತೆ ಇದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಶನಿವಾರ ಪ್ರತಿಪಾದಿಸಿದ್ದಾರೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ ಮುಖ್ಯನ್ಯಾಯಮೂರ್ತಿ ಎನ್.ವಿ. ರಮಣ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯ ವಿಳಂಬ ಮಾಡಿದರೆ, ನ್ಯಾಯ ನಿರಾಕರಿಸಿದಂತೆ ಎಂದರು.
ಮುಖ್ಯನ್ಯಾಯಮೂರ್ತಿ ರಮಣ ಅವರನ್ನು ಪ್ರಶಂಶಿಸಿದ ಅವರು, ರಮಣ ಅವರು ನ್ಯಾಯಾಂಗದಲ್ಲಿ ನವೋದಯವನ್ನೇ ಸೃಷ್ಟಿಸಿದ್ದಾರೆ ಎಂದು ಗಮನ ಸೆಳೆದರು.
ಕೇಂದ್ರ ಸಂಪುಟ ಪುನಾರಚನೆಯಾದ ಬಳಿಕ ಜುಲೈಯಲ್ಲಿ ಅಧಿಕಾರ ಸ್ವೀಕರಿಸಿರುವ 49ರ ಹರೆಯ ರಿಜಿಜು, ದೇಶದ ನ್ಯಾಯಾಲಯಗಳಲ್ಲಿ ಪ್ರಕರಣಗಳು ವಿಚಾರಣೆಗ ಬಾಕಿ ಉಳಿಯುತ್ತಿರುವ ಬಗ್ಗೆ ಪ್ರಶ್ನಿಸಿದರು.
''ನ್ಯಾಯಾಲಯದಲ್ಲಿ ಪ್ರಕರಣಗಳು ವಿಚಾರಣೆಗ ಬಾಕಿ ಉಳಿಯುತ್ತಿರುವ ಬಗ್ಗೆ ಜನರು ಯಾವಾಗಲು ಧ್ವನಿ ಎತ್ತುತ್ತಿರುತ್ತಾರೆ. ಅದರ ಬಗ್ಗೆ ಕೆಳ ನ್ಯಾಯಾಲಯಗಳು ತುರ್ತಾಗಿ ಗಮನಹರಿಸಬೇಕಾಗಿದೆ'' ಎಂದು ಅವರು ಹೇಳಿದರು.
ಬಡತನ ಹಾಗೂ ಗ್ರಾಮೀಣ ಪ್ರದೇಶದ ಹಿನ್ನೆಲೆಯಿರುವ ವ್ಯಕ್ತಿ ನ್ಯಾಯ ಪಡೆಯಬೇಕಾದರೆ, ಆತ ಎಲ್ಲವನ್ನೂ ತ್ಯಾಗ ಮಾಡಬೇಕು. ಕೆಲವೊಮ್ಮೆ ಆತ ತನ್ನ ಭೂಮಿ ಹಾಗೂ ಇತರ ಸೊತ್ತುಗಳನ್ನು ಮಾರಾಟ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.
ಆದುದರಿಂದ ನ್ಯಾಯ ಪಡೆಯಲು ವಿಳಂಬವಾದರೆ, ಅದು ನಮ್ಮೆಲ್ಲರ ಮುಂದಿರುವ ಅತಿ ದೊಡ್ಡ ಪ್ರಶೆ . ನ್ಯಾಯ ವಿಳಂಬಿಸಿದರೆ, ನ್ಯಾಯ ತಿರಸ್ಕರಿಸಿದಂತೆ. ಅಂತಿಮ ವ್ಯಕ್ತಿಗೆ ಕೂಡ ಆದ್ಯತೆ ನೀಡಬೇಕಾದ ಅಗತ್ಯತೆ ಇದೆ ಎಂದು ಅವರು ತಿಳಿಸಿದರು.
''ಭಾರತದಲ್ಲಿ ಲಕ್ಷಾಂತರ ಜನರಿಗೆ ನ್ಯಾಯಾಲಯ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಹಣದ ಕೊರತೆ, ವಿಚಾರಣೆಯಲ್ಲಿನ ವಿಳಂಬ ಅತಿ ದೊಡ್ಡ ಸವಾಲು'' ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದರು.
ರಮಣ ಅವರನ್ನು ಶ್ಲಾಘಿಸಿದ ರಿಜಿಜು, ಭಾರತದ ಮುಖ್ಯ ನ್ಯಾಯಮೂರ್ತಿ ಏನು ಮಾಡಬೇಕಾಗಿದೆಯೋ ಅದನ್ನು ಖಚಿತವಾಗಿ ಮಾಡುತ್ತಿದ್ದಾರೆ ಎಂದರು.