ನವದೆಹಲಿ: 'ಅಣ್ವಸ್ತ್ರ ಮುಕ್ತ ಪ್ರಪಂಚ ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ಸಂಪೂರ್ಣ ನಿರ್ಮೂಲನೆಯ ಗುರಿ ಸಾಧನೆಗೆ ಭಾರತ ಬದ್ಧವಾಗಿದೆ' ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶೃಂಗ್ಲಾ ಸೋಮವಾರ ಹೇಳಿದ್ದಾರೆ.
'ಸಾಮೂಹಿಕ ವಿನಾಶದ ಅಣ್ವಸ್ತ್ರಗಳ ಪ್ರಸರಣ ನಿರೋಧ; ಸಮಗ್ರ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದ' ಸಂಬಂಧ ಅಮೆರಿಕ ಭದ್ರತಾ ಕೌನ್ಸಿಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಅಣ್ವಸ್ತ್ರ ಮುಕ್ತ ವಿಶ್ವ ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ಸಂಪೂರ್ಣ ನಿರ್ಮೂಲನೆಗೆ ಭಾರತ ಬದ್ಧವಾಗಿದೆ. ಯುಎನ್‌ಜಿಯ ನಿಶ್ಶಸ್ತ್ರೀಕರಣದ ವಿಶೇಷ ಅಧಿವೇಶನದ (SSOD-I) ದಾಖಲೆಯಂತೆ ಪರಮಾಣು ನಿಶ್ಶಸ್ತ್ರೀಕರಣಕ್ಕೆ ನೀಡಲಾದ ಆದ್ಯತೆಗೆ ಅನುಗುಣವಾಗಿ ಭಾರತ ಇರಲಿದೆ' ಎಂದು ತಿಳಿಸಿದ್ದಾರೆ.
'ಈ ಗುರಿಯನ್ನು ಸಾರ್ವತ್ರಿಕ ಬದ್ಧತೆ, ಜಾಗತಿಕ ಹಾಗೂ ತಾರತಮ್ಯವಿಲ್ಲದ ಬಹುಪಕ್ಷೀಯ ಚೌಕಟ್ಟಿನಲ್ಲಿ ಹಂತ ಹಂತದ ಪ್ರಕ್ರಿಯೆ ಮೂಲಕ ಸಾಧಿಸಬಹುದೆಂಬ ಭರವಸೆ ನಮಗಿದೆ' ಎಂದು ಹೇಳಿದ್ದಾರೆ.
ಭಾರತವು ಪರಮಾಣು ಸ್ಫೋಟಕ ಪರೀಕ್ಷೆ ಮೇಲೆ ಸ್ವಯಂಪ್ರೇರಿತ ಹಾಗೂ ಏಕಪಕ್ಷೀಯ ನಿಷೇಧವನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.
'ಜಾಗತಿಕ ಪರಮಾಣು ಭದ್ರತೆಯನ್ನು ಬಲಪಡಿಸುವಲ್ಲಿ ಭಾರತ ಸಕ್ರಿಯವಾಗಿ ಬೆಂಬಲ ನೀಡುತ್ತಿದೆ ಹಾಗೂ ಈ ವಿಷಯದಲ್ಲಿ ಸಾಕಷ್ಟು ಕೊಡುಗೆ ನೀಡಿದೆ. ಅಣ್ವಸ್ತ್ರಗಳ ಜಾಗತಿಕ ಪ್ರಸರಣ ನಿರೋಧದ ಪ್ರಯತ್ನಗಳಲ್ಲಿ ಭಾರತ ಪ್ರಮುಖ ಪಾಲುದಾರನಾಗಿದೆ' ಎಂಬುದನ್ನು ಶೃಂಗ್ಲಾ ಒತ್ತಿ ಹೇಳಿದ್ದಾರೆ.
'ನಿಶ್ಶಸ್ತ್ರೀಕರಣ ಕುರಿತ ಸಮ್ಮೇಳನದಲ್ಲಿ ಭಾರತವು ಸಿಟಿಬಿಟಿ ಮಾತುಕತೆಯಲ್ಲಿ ಭಾಗವಹಿಸಿತ್ತು. ಆದರೆ ಒಪ್ಪಂದವು ಭಾರತ ಎತ್ತಿದ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡದ ಕಾರಣ ಭಾರತ ಒಪ್ಪಂದಕ್ಕೆ ಒಳಗಾಗಲು ಸಾಧ್ಯವಾಗಲಿಲ್ಲ' ಎಂದು ಹೇಳಿದರು.
ಪರಮಾಣು ನಿಶ್ಶಸ್ತ್ರೀಕರಣ ಹಾಗೂ ಪ್ರಸರಣ ನಿರೋಧವನ್ನು ಬಲಪಡಿಸಲು ಭಾರತ ನಿಶ್ಶಸ್ತ್ರೀಕರಣ ಸಮಾವೇಶ, ಅಮೆರಿಕ ನಿಶ್ಶಸ್ತ್ರೀಕರಣ ಆಯೋಗ ಹಾಗೂ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಸಮಿತಿಯನ್ನು ಒಳಗೊಂಡ ನಿಶ್ಶಸ್ತ್ರೀಕರಣದ ಚೌಕಟ್ಟಿನಲ್ಲಿ ಭಾರತ ಕಾರ್ಯ ನಿರ್ವಹಿಸಲಿದೆ ಎಂದು ಶೃಂಗ್ಲಾ ಪ್ರತಿಪಾದಿಸಿದರು.
ವಿಶ್ವದ ಏಕೈಕ ಬಹುಪಕ್ಷೀಯ ನಿಶ್ಶಸ್ತ್ರೀಕರಣದ ಸಂಧಾನ ವೇದಿಕೆಯಾಗಿ, ಜಾಗತಿಕ ನಿಶ್ಶಸ್ತ್ರೀಕರಣದ ಕಾರ್ಯಸೂಚಿಯನ್ನು ಮುನ್ನಡೆಸುವ ಮಾತುಕತೆಗೆ ಸಮ್ಮೇಳನ ಉತ್ತಮ ವೇದಿಕೆಯಾಗಿ ಕೆಲಸ ನಿರ್ವಹಿಸಲಿದೆ' ಎಂದು ತಿಳಿಸಿದರು.