ಲಕ್ನೊ: ಗೋರಖ್ ಪುರದ ಅಂತರಧರ್ಮೀಯ ಜೋಡಿಗೆ ಕಿರುಕುಳದಿಂದ ರಕ್ಷಣೆ ನೀಡಿ ಸತಿ-ಪತಿಗಳಾಗಿ ನೆಮ್ಮದಿಯಿಂದ ಜೀವನ ನಡೆಸಲು ಆದೇಶ ಹೊರಡಿಸಿರುವ ಅಲಹಾಬಾದ್ ಹೈಕೋರ್ಟ್, ವಯಸ್ಕರು ತಮ್ಮ ಧರ್ಮದ ಹೊರತಾಗಿಯೂ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿರುತ್ತಾರೆ ಎಂದು ಆದೇಶ ಹೊರಡಿಸಿದೆ. ವಯಸ್ಕ ಅಂತರಧರ್ಮೀಯ ಜೋಡಿಯ ಪ್ರೀತಿ-ಪ್ರೇಮಕ್ಕೆ ಅವರ ಪೋಷಕರು ಸಹ ಅಡ್ಡಿಪಡಿಸುವಂತಿಲ್ಲ ಎಂದು ಹೇಳಿದೆ.
ಶಿಫಾ ಹಸನ್ ಮತ್ತು ಆಕೆಯ ಹಿಂದೂ ಪತಿ ಜಂಟಿಯಾಗಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಮನೋಜ್ ಕುಮಾರ್ ಗುಪ್ತಾ ಮತ್ತು ನ್ಯಾಯಮೂರ್ತಿ ದೀಪಕ್ ವರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಇಬ್ಬರು ವಯಸ್ಕರು ತಾವು ನಂಬಿರುವ ನಂಬಿಕೆ ಮತ್ತು ಧರ್ಮದ ಹೊರತಾಗಿಯೂ ತಮ್ಮ ವೈವಾಹಿಕ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದು ಇದರಲ್ಲಿ ಯಾವುದೇ ವಿವಾದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಅರ್ಜಿಯು ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವುದಾಗಿ ಹೇಳಿಕೊಳ್ಳುವ ಮತ್ತು ಪ್ರಮುಖವಾಗಿರುವ ಇಬ್ಬರು ವ್ಯಕ್ತಿಗಳ ಜಂಟಿ ಅರ್ಜಿಯಾಗಿರುವುದರಿಂದ, ಅವರ ಪೋಷಕರು ಕೂಡ ಅವರ ಸಂಬಂಧವನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತೀರ್ಪು ವೇಳೆ ಪ್ರಕಟಿಸಿದರು.
ಅರ್ಜಿಯಲ್ಲಿ, ತಾವು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದು ನಮ್ಮ ಇಚ್ಛೆಯ ಮೇರೆಗೆ ಒಟ್ಟಿಗೆ ಜೀವಿಸುತ್ತಿದ್ದೇವೆ. ಆದರೆ ನಮ್ಮ ಕುಟುಂಬದಲ್ಲಿ ಕೆಲವರು ನಮ್ಮ ಪ್ರೀತಿಯನ್ನು ಒಪ್ಪುತ್ತಿಲ್ಲ, ಇದರಿಂದ ನಮ್ಮ ನೆಮ್ಮದಿಯ ಬದುಕಿಗೆ ಅಡ್ಡಿಯುಂಟಾಗಿದೆ ಎಂದು ಆರೋಪಿಸಿದ್ದರು.
ವಾದ-ವಿವಾದ ಆಲಿಸಿದ ನ್ಯಾಯಾಲಯ ಜೋಡಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದು ಅವರ ಸಂಬಂಧವನ್ನು ಅವರ ಪೋಷಕರು ಸಹ ವಿರೋಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅರ್ಜಿದಾರರಿಗೆ ಹುಡುಗಿಯ ತಂದೆಯಿಂದ ಅಥವಾ ಬೇರೆ ಯಾವುದೇ ವ್ಯಕ್ತಿಯಿಂದ ಯಾವುದೇ ಕಿರುಕುಳಕ್ಕೆ ಒಳಗಾಗದಂತೆ ನೋಡಿಕೊಳ್ಳುವಂತೆ ಗೋರಖ್‌ಪುರ ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.
ವಿಚಾರಣೆಯ ಸಮಯದಲ್ಲಿ, ಯುವತಿ- ಹಸನ್ ಅವರು ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಆಕೆಯ ಹೇಳಿಕೆಯಂತೆ, ಗೋರಖ್‌ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಈ ಅರ್ಜಿಯ ಕುರಿತು ಸಂಬಂಧಿತ ಪೊಲೀಸ್ ಠಾಣೆಯಿಂದ ವರದಿಗಾಗಿ ಕರೆಸಿಕೊಂಡಿದ್ದರು. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸಲ್ಲಿಸಿದ ವರದಿಯ ಪ್ರಕಾರ, ಹುಡುಗನ ತಂದೆ ಮದುವೆಗೆ ಒಪ್ಪದಿದ್ದರೂ, ಆತನ ತಾಯಿ ಒಪ್ಪಿದ್ದರು. ಆದಾಗ್ಯೂ, ಅರ್ಜಿದಾರರ ಪೋಷಕರು ಇಬ್ಬರೂ ಮದುವೆಗೆ ವಿರೋಧಿಸಿದರು.
ಇದರಿಂದಾಗಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ನೂತನ ಜೋಡಿ ಕೋರ್ಟ್ ಮೊರೆ ಹೋಗಿತ್ತು. ಯುವತಿಗೆ 19 ವರ್ಷವಾಗಿದ್ದು, ಯುವಕನಿಗೆ 24 ವರ್ಷವಾಗಿರುವುದರಿಂದ ನ್ಯಾಯಾಲಯವು ಅವರಿಗೆ ರಕ್ಷಣೆ ನೀಡಲು ಮುಂದಾಯಿತು.