ನವದೆಹಲಿ: ಹೊಸ ಕೊರೊನಾ ರೂಪಾಂತರ ತಳಿ "ಮ್ಯು" ಮೇಲೆ ತೀವ್ರ ನಿಗಾ ಇರಿಸಿರುವುದಾಗಿ ತಿಳಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಹೊಸ ತಳಿ ಲಸಿಕೆ ನಿರೋಧಕ (ಲಸಿಕೆಗೂ ಬಗ್ಗದ) ವಾಗಿರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಮ್ಯು- ಬಿ.1.621 ವೈಜ್ಞಾನಿಕ ಹೆಸರಿನಲ್ಲಿ ಗುರುತಿಸಲಾಗಿದ್ದು ಜನವರಿ 2021 ರಲ್ಲಿ ಕೊಲಂಬಿಯಾದಲ್ಲಿ ಪತ್ತೆಯಾಗಿತ್ತು. ಆಗಿನಿಂದ ದಕ್ಷಿಣ ಅಮೆರಿಕ ಹಾಗೂ ಯುರೋಪ್ ನಲ್ಲಿ ಈ ತಳಿಯ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು.
ಅಮೆರಿಕ, ಬ್ರಿಟನ್, ಯುಎಸ್, ಹಾಂಕ್ ಕಾಂಗ್ ಗಳಲ್ಲಿ ಮ್ಯು ರೂಪಾಂತರಿ ಕಂಡುಬಂದಿದೆ.
ಸೀಕ್ವೆನ್ಸ್ ಗೆ ಒಳಪಟ್ಟ ಕೋವಿಡ್-19 ಪ್ರಕರಣಗಳ ಪೈಕಿ ಜಾಗತಿಕವಾಗಿ ಮ್ಯು ರೂಪಾಂತರಿ ಪ್ರಕರಣಗಳು ಸದ್ಯಕ್ಕೆ ವಿರಳವಾಗಿದ್ದರೂ ಶೇ.0.1 ರಷ್ಟಿದೆ. ಆದರೆ ಕೊಲಂಬಿಯಾದಲ್ಲಿ ಶೇ.39 ರಷ್ಟು ಈಕ್ವೆಡಾರ್ (ಶೇ.13) ಗಳಲ್ಲಿ ಗಣನೀಯ ಏರಿಕೆ ಕಂಡಿದೆ.
ಹೊಸ ರೂಪಾಂತರಿಯನ್ನು ಡಬ್ಲ್ಯುಹೆಚ್‌ಒ ಆ.30 ರಂದು ವಾಚ್ ಲಿಸ್ಟ್ ಗೆ ಹಾಕಿದ್ದು, 39 ದೇಶಗಳಲ್ಲಿ ಹೊಸ ರೂಪಾಂತರಿ ಪತ್ತೆಯಾಗಿದ್ದು ಮ್ಯು ವೈರಾಣು ರೋಗ ನಿರೋಧಕ ಶಕ್ತಿಯ ಕಣ್ತಪ್ಪಿಸಿ ಕಾಯಿಲೆ ಹರಡಬಲ್ಲ ಸಾಧ್ಯತೆ ಇದೆ. ಮ್ಯು ತಳಿ ಮುಂಬರುವ ದಿನಗಳಲ್ಲಿ ಜಗತ್ತಿಗೆ ಆತಂಕವನ್ನು ತಂದೊಡ್ಡಬಲ್ಲ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.