ನವದೆಹಲಿ: ಕೊರೊನಾ ಸಾಂಕ್ರಾಮಿಕದಿಂದಾಗಿ ಕುಗ್ಗಿರುವ ಪ್ರವಾಸೋದ್ಯಮ ವಲಯದ ಚೇತರಿಕೆಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವಾಲಯ ವಿವಿಧ ಪಾಲುದಾರರೊಂದಿಗೆ ಚರ್ಚೆ ನಡೆಸುತ್ತಿದೆ ಹಾಗೂ ಪ್ರವಾಸೋದ್ಯಮದ ಪುನರುಜ್ಜೀವನಕ್ಕೆ ಕೊರೊನಾ ಲಸಿಕೆ ಪಡೆಯುವುದು ತುಂಬಾ ಮುಖ್ಯವಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ತಿಳಿಸಿದ್ದಾರೆ.
ವಿಶ್ವ ಪ್ರವಾಸೋದ್ಯಮ ದಿನವಾದ ಸೋಮವಾರ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ 'ಪ್ರವಾಸೋದ್ಯಮದ ಅಂತರ್ಗತ ಬೆಳವಣಿಗೆ' ಎಂಬ ಸಮ್ಮೇಳನ ಆಯೋಜಿಸಿದ್ದು, ಲೋಕಸಭಾ ಸ್ಪೀಕರ್ ಓಂಬಿರ್ಲಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರೆಡ್ಡಿ, ಸಾಂಕ್ರಾಮಿಕ ಸಮಯದಲ್ಲಿ ಅತಿ ಹೆಚ್ಚು ಪೆಟ್ಟು ಪಡೆದ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮವೂ ಒಂದು. ಹೀಗಾಗಿ ಸರ್ಕಾರ ಪ್ರವಾಸೋದ್ಯಮದ ಪುನರುಜ್ಜೀವನ ಹಾಗೂ ಚೇತರಿಕೆಗೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿದೇಶಿಗರಿಗೆ ಐದು ಲಕ್ಷ ಉಚಿತ ವೀಸಾಗಳನ್ನು ವಿತರಿಸುತ್ತಿರುವುದು ಕೂಡ ಇದರ ಒಂದು ಪ್ರಮುಖ ಭಾಗವಾಗಿದೆ ಎಂದು ವಿವರಿಸಿದರು.
ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕೇಂದ್ರ ವಿವಿಧ ಪ್ಯಾಕೇಜ್‌ಗಳನ್ನು ಘೋಷಿಸಿದೆ ಹಾಗೂ ವಲಯಗಳಲ್ಲಿ ಸಡಿಲಿಕೆಗಳನ್ನು ಮಾಡಿದೆ. ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸೋದ್ಯಮದ ಎಲ್ಲಾ ಪಾಲುದಾರರಿಗೆ ಆರೋಗ್ಯ ಹಾಗೂ ಸುರಕ್ಷತೆಯೆಡೆಗೆ ಗಮನ ಕೇಂದ್ರೀಕರಿಸುವಂತೆ ಸೂಚನೆ ನೀಡಿದೆ ಎಂದರು.
'ಪ್ರವಾಸೋದ್ಯಮದ ಪುನರುಜ್ಜೀವನಕ್ಕೆ ಲಸಿಕೆ ಪಡೆಯುವುದು ಪ್ರಮುಖವಾಗಿದೆ ಹಾಗೂ ಭಾರತವು ಈಗಾಗಲೇ 85 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಿದೆ' ಎಂದು ಹೇಳಿದರು.
ದೇಶವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಅಪಾರ ಸಾಮರ್ಥ್ಯ ಹೊಂದಿದೆ ಎಂದು ಪ್ರತಿಪಾದಿಸಿದ ಸಚಿವ ರೆಡ್ಡಿ, ತಮ್ಮ ಸಚಿವಾಲಯ ದೇಶದಲ್ಲಿ ಹೊಸ ಪ್ರವಾಸೋದ್ಯಮ ಸ್ಥಳಗಳ ಅನ್ವೇಷಣೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು. ಈಶಾನ್ಯ ರಾಜ್ಯಗಳಲ್ಲಿಯೂ ಪ್ರವಾಸೋದ್ಯಮ ಉತ್ತೇಜನಕ್ಕೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.
"ಪ್ರವಾಸೋದ್ಯಮದಲ್ಲಿ ಉದ್ಯೋಗ ಸೃಷ್ಟಿಗೆ, ಸುಸ್ಥಿರ ಅಭಿವೃದ್ಧಿಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸಿ ತಾಣಗಳ ಸ್ವಚ್ಛತೆ, ಸುರಕ್ಷತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದೆ. ಕೊರೊನಾದಿಂದ ತತ್ತರಿಸಿರುವ ಪ್ರವಾಸೋದ್ಯಮ ಕ್ಷೇತ್ರ ಪುನಶ್ಚೇತನಗೊಳ್ಳುವ ಭರವಸೆಯಿದೆ' ಎಂದರು.
ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಪ್ರವಾಸಿ ತಾಣಗಳನ್ನು ಮುಚ್ಚಿದ್ದರಿಂದ ಆರ್ಥಿಕ ನಷ್ಟವಾಗಿದೆ. ಇದೀಗ ಕೋವಿಡ್ ನಿಯಮಗಳೊಂದಿಗೆ ಒಂದೊಂದೇ ಪ್ರವಾಸ ತಾಣಗಳನ್ನು ತೆರೆಯಲಾಗಿದೆ.
ಭಾರತದಲ್ಲಿ ಪ್ರವಾಸೋದ್ಯಮ ಆರ್ಥಿಕತೆಯ ವಲಯಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಜಿಡಿಪಿಗೆ 6.23% ಹಾಗೂ ಭಾರತದಲ್ಲಿ ಒಟ್ಟು ಉದ್ಯೋಗಕ್ಕೆ 8.78%ರಷ್ಟು ಕೊಡುಗೆಯನ್ನು ಪ್ರವಾಸೋದ್ಯಮ ನೀಡುತ್ತಿದೆ. ವಾರ್ಷಿಕ 5 ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸುತ್ತಾರೆ. ಭಾರತ ಪ್ರವಾಸೋದ್ಯಮ ಕ್ಷೇತ್ರದಲ್ಲಿ ದರದ ವಿಷಯದಲ್ಲಿ ಆರನೇ ಸ್ಥಾನ ಹಾಗೂ ಸುರಕ್ಷತೆ, ಭದ್ರತೆ ವಿಷಯದಲ್ಲಿ 39ನೇ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಮುಂದಿನ ಹತ್ತು ವರ್ಷಗಳವರೆಗೂ ಪ್ರವಾಸೋದ್ಯಮಕ್ಕೆ ಪೂರಕ ಸಾಮರ್ಥ್ಯ ಹೊಂದಿದೆ ಎಂದು ಆರ್ಥಿಕ ತಜ್ಞರು ವಿವರಿಸಿದ್ದಾರೆ.
ವಿಶ್ವ ಪ್ರವಾಸೋದ್ಯಮ ದಿನದ ಹಿನ್ನೆಲೆ: 1997 ರಿಂದ ಪ್ರವಾಸೋದ್ಯಮ ದಿನ ಆಚರಣೆಯಲ್ಲಿದೆ. ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) 1980ರಲ್ಲಿ ಸೆಪ್ಟೆಂಬರ್ 27ನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಘೋಷಣೆ ಮಾಡಿತು. ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ವೃದ್ಧಿಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ಸೆಪ್ಟಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದೆ. 1997ರ ನಂತರ ಪ್ರತಿ ವರ್ಷವೂ ಒಂದೊಂದು ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡು ಅಧಿಕೃತವಾಗಿ ಪ್ರವಾಸೋದ್ಯಮ ದಿನ ಆಚರಿಸುವ ನಿರ್ಧಾರ ಕೈಗೊಂಡಿತು.