ಶ್ರೀನಗರ: ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದಲ್ಲಿ ಐಇಡಿ ಸ್ಫೋಟವನ್ನು ವಿಫಲಗೊಳಿಸಿದ್ದು ಭಾರಿ ಅನಾಹುತ ತಪ್ಪಿದೆ.
ಬದ್ಗಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ಪ್ರದೇಶ ರಕ್ಷಣಾ ವಲಯ, ಶ್ರೀನಗರ ವಿಮಾನ ನಿಲ್ದಾಣ, ತಾಂತ್ರಿಕ ಏರ್ ಪೋರ್ಟ್, ಜಮ್ಮು-ಕಾಶ್ಮೀರ ಲೈಟ್ ಇನ್ಫಾಂಟ್ರಿ ಸೇನೆಯ ಕೇಂದ್ರ ಕಚೇರಿ, ಸಾರ್ವಜನಿಕರಿಗೆ ಸಂಬಂಧಿಸಿದ ಸೂಕ್ಷ್ಮ ಪ್ರದೇಶವಾಗಿದೆ.
ಐಇಡಿ ಪತ್ತೆಯಾದ ಗೊಗೊ ಪ್ರದೇಶದಲ್ಲಿ ಸೇನೆ ಹಾಗೂ ಪೊಲೀಸರು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿವೆ.
ಸಂಭಾವ್ಯ ದಾಳಿಯ ಮಾಹಿತಿ ಪಡೆದ ಭದ್ರತಾ ಪಡೆಗಳು ಶೋಧಕಾರ್ಯಾಚರಣೆಯನ್ನು ಆರಂಭಿಸಿದ ವೇಳೆ ಈ ಐಇಡಿ ಪತ್ತೆಯಾಗಿದೆ. ತಕ್ಷಣವೇ ಬಾಂಬ್ ನಿಗ್ರಹ ದಳವನ್ನು ಕರೆಸಿ ಐಇಡಿಯನ್ನು ನಿಷ್ಕ್ರಿಯಗೊಳಿಸಲಾಗಿದೆ.
ಕಾಶ್ಮೀರದ ಕಣಿವೆಯಲ್ಲಿ ವಿವಿಧೆಡೆ ಎನ್‌ಐಎ ದಾಳಿ
ರಾಷ್ಟ್ರೀಯ ತನಿಖಾ ದಳ ಸೆ.21 ರಂದು ಬೆಳಿಗ್ಗೆ ಕಾಶ್ಮೀರ ಕಣಿವೆಯ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದೆ. ಎನ್‌ಐಎ ಪೊಲೀಸರು ಲಸ್ಜನ್ ನ ನಿವಾಸಿ ಮೊಹಮ್ಮದ್ ಶಫಿ ವಾನಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ವಾನಿ ನಿವಾಸದಲ್ಲಿ ಶೋಧಕಾರ್ಯಾಚರಣೆ ನಡೆದಿದ್ದು, ಆ ವ್ಯಕ್ತಿ ಹಾಗೂ ಆತನ ಪುತ್ರನ ಮೊಬೈಲ್ ಗಳನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಬಳಿಕ ವಾನಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಚೌಕ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಕುಲ್ಗಾಮ್ ಜಿಲ್ಲೆಯಲ್ಲಿ ವಸೀಮ್ ಅಹ್ಮದ್ ದರ್ ನಿವಾಸದ ಮೇಲೆ ಎನ್‌ಐಎ ದಾಳಿ ನಡೆದಿದೆ. ಅನನಂತ್ ನಾಗ್ ನಲ್ಲಿ ಬಶೀರ್ ಅಹ್ಮದ್ ನಿವಾಸದ ಮೇಲೆ, ಬಾರಾಮುಲ್ಲಾ ಜಿಲ್ಲೆಯಲ್ಲಿ ಘುಲಾಮ್ ಮೊಹ್ಯುದ್ ದಿನ್ ವಾನಿ- ರೇಷ್ಮೆ ಇಲಾಖೆಯ ನೌಕರನ ನಿವಾಸದ ಮೇಲೆಯೂ ದಾಳಿ ನಡೆದಿದೆ.