ಕಾಸರಗೋಡು: ಸಾರ್ವಜನಿಕ ಸಂಸ್ಥೆಗಳನ್ನು ಸಂರಕ್ಷಿಸುವುದು ಮತ್ತು ಅವುಗಳನ್ನು ಲಾಭದಾಯಕವಾಗಿಸುವುದು ರಾಜ್ಯ ಸರಕಾರದ ಗುರಿ ಎಂದು ಉದ್ದಿಮೆ-ತೆಂಗುನನಾರು ಸಚಿವ ಪಿ.ರಾಜೀವ್ ತಿಳಿಸಿದರು.
ಕಾಞಂಗಾಡಿನ ಪುದುಕೈ ಯಲ್ಲಿ ನಿರ್ಮಿಸಲಾದ ಹೈಟೆಕ್ ತೆಂಗಿನನಾರು ಡಿಫೈಬರಿಂಗ್ ಯೂನಿಟ್ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರಕಾರದ 100 ದಿನಗಳ ಕ್ರಿಯಾ ಕಾರ್ಯಕ್ರಮಗಳ ಅಂಗವಾಗಿ ಈ ಯೂನಿಟ್ ಆರಂಭಿಸಲಾಗಿದೆ.
ರಾಜ್ಯದಲ್ಲಿ ಧಾರಾಳ ತೆಂಗಿನ ನಾರು ಲಭ್ಯವಿದ್ದರೂ, ಕೇವಲ ಶೇ 18 ಮಾತ್ರ ಉದ್ದಿಮೆಗಾಗಿ ಬಳಕೆಯಾಗುತ್ತಿದೆ. ಇವುಗಳಲ್ಲಿ ಸೇ 35 ಮಾತ್ರ ಮೌಲ್ಯಾಧರಿತ ಉತ್ಪನ್ನಗಳಾಗಿ ಮಾರ್ಪಡುತ್ತಿವೆ. ಇದನ್ನು ಶೇ 45 ಆಗಿ ಹೆಚ್ಚಳಗೊಳಿಸಲು ಉದ್ದೇಶಿಸಲಾಗಿದೆ ಎಂದವರು ನುಡಿದರು.
ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಶಾಸಕ ಎನ್.ಎ.ನೆಲ್ಲಿಕುನ್ನು, ಉದ್ದಿಮೆ ಇಲಾಖಳೆ ಪ್ರಧಾನ ಕಾರ್ಯದರ್ಶಿ ಎ.ಪಿ.ಎಂ.ಮುಹಮ್ಮದ್ ಹನೀಷ್ ವಿಶೇಷ ಆಹ್ವಾನಿತರಾಗಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಮೊದಲಾದವರು ಉಪಸ್ಥಿತರಿದ್ದರು.