ನವದೆಹಲಿ: 'ಲೋಕಪಾಲ ಹೊರಡಿಸಿದ್ದ ಆದೇಶದ ಮರುಪರಿಶೀಲನೆ ಕೋರಿದ್ದ ಮನವಿ, ಅರ್ಜಿಯನ್ನು ಪುರಸ್ಕರಿಸಲಾಗದು. ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿಲ್ಲ' ಎಂದು ದೂರುದಾರರಿಗೆ ಲೋಕಪಾಲ ತಿಳಿಸಿದೆ.
ಭ್ರಷ್ಟಾಚಾರ ತಡೆಗೆ ರಚಿಸಲಾಗಿರುವ ಲೋಕಪಾಲವು, ಆದೇಶವನ್ನು ಮರುಪರಿಶೀಲನೆ ಕೋರಿ ಕೆಲ ದೂರುದಾರರು ಅರ್ಜಿ ಸಲ್ಲಿಸುತ್ತಿರುವುದನ್ನು ಉಲ್ಲೇಖಿಸಿ ಈ ಮಾತು ಹೇಳಿದೆ.
ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ 2013ರ ಅನುಸಾರ ಆದೇಶ ಮರುಪರಿಶೀಲಿಸಲು ಅವಕಾಶವಿಲ್ಲ. ಹೀಗಾಗಿ, ಇಂಥ ಯಾವುದೇ ಮನವಿಯನ್ನು ಪರಿಗಣಿಸುವುದಿಲ್ಲ ಎಂದು ಈ ಕುರಿತ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವಿಷಯ ಸಂಸದೀಯ ಸಮಿತಿ ಮುಂದೆಯೂ ಬಂದಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನಿಯಮ ತಿದ್ದುಪಡಿ ಸಾಧ್ಯತೆ ಕುರಿತು ಪರಿಶೀಲಿಸಲು ಶಿಫಾರಸು ಮಾಡಿದೆ ಎಂದು ಸಮಿತಿಯು ಬೇಡಿಕೆ ಮತ್ತು ಅನುದಾನ ಕುರಿತ 106ನೇ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದೇಶ ಮರುಪರಿಶೀಲನೆಗೆ ಅವಕಾಶ ಇರಬೇಕು ಎಂಬ ಅರ್ಜಿಗಳ ಪರಿಶೀಲನೆಗಾಗಿ ಲೋಕಪಾಲ ಅಧ್ಯಕ್ಷ ಪಿನಾಕಿ ಚಂದ್ರಘೋಶ್ ಅವರು ತ್ರಿಸದಸ್ಯರ ಸಮಿತಿಯನ್ನು ಅ. 6.2020ರಲ್ಲಿ ರಚಿಸಿದ್ದರು. ನ್ಯಾಯಮೂರ್ತಿಗಳಾದ ಅಭಿಲಾಶಾ ಕುಮಾರಿ, ಡಿ.ಕೆ.ಜೈನ್ ಮತ್ತು ಐ.ಪಿ.ಗೌತಮ್ ಅವರಿದ್ದ ಸಮಿತಿಯು, ನಿಯಮ ತಿದ್ದುಪಡಿ ಮಾಡಬೇಕು ಎಂಬುದನ್ನು ಸರ್ಕಾರ ಪರಿಶೀಲಿಸಬಹುದು ಎಂದು ಶಿಫಾರಸು ಮಾಡಿತ್ತು.