ನವದೆಹಲಿ: ಭಾರತದಲ್ಲಿ ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ಸೇವೆಗಳನ್ನು ನಿಲ್ಲಿಸುವಂತೆ ಸರಕಾರವನ್ನು ಆಗ್ರಹಿಸಿರುವ ಗೃಹವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯು,ಇಂತಹ ಸೇವೆಗಳು ಕ್ರಿಮಿನಲ್ಗಳಿಗೆ ಆನ್ಲೈನ್ನಲ್ಲಿ ಅನಾಮಿಕರಾಗಿರಲು ಅವಕಾಶ ನೀಡುತ್ತವೆ ಎಂದು ಆರೋಪಿಸಿದೆ.
ಅಂತರ್ಜಾಲ ಸೇವಾ ಪೂರೈಕೆದಾರರ ನೆರವಿನೊಂದಿಗೆ ಇಂತಹ ವಿಪಿಎನ್ಗಳನ್ನು ಗುರುತಿಸಲು ಮತ್ತು ಶಾಶ್ವತವಾಗಿ ತಡೆಹಿಡಿಯಲು ಗೃಹ ಸಚಿವಾಲಯವು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ ಸಮನ್ವಯ ಹೊಂದಿರುವುದು ಅಗತ್ಯವಾಗಿದೆ ಎಂದು ಸಮಿತಿಯು ಪ್ರಮುಖವಾಗಿ ಬಿಂಬಿಸಿದೆ.
ದೇಶದಲ್ಲಿ ವಿಪಿಎನ್ ಗಳನ್ನು ಶಾಶ್ವತವಾಗಿ ತಡೆಗಟ್ಟಲು ಭಾರತವು ಅಂತರರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಮನ್ವಯ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದೂ ಸಮಿತಿಯು ಶಿಫಾರಸು ಮಾಡಿದೆ.
ಕೇಂದ್ರ ಸರಕಾರವು ಈ ಹಿಂದೆ ದೇಶದ ಬೃಹತ್ ಬಾಹ್ಯಗುತ್ತಿಗೆ ಐಟಿ ಉದ್ಯಮದ ದೂರದಿಂದ ಕಾರ್ಯ ನಿರ್ವಹಿಸುವ ಸಾಮರ್ಥ್ಯಕ್ಕೆ ಪೂರಕವಾಗಿ ವಿಪಿಎನ್ ಗಳ ಅಧಿಕೃತ ಬಳಕೆಗೆ ಶಿಫಾರಸು ಮಾಡುವ ಮೂಲಕ ಇತರ ಸೇವೆಗಳ ಪೂರೈಕೆದಾರರ (ಒಎಸ್ಪಿ) ಕ್ಷೇತ್ರದ ಉದಾರೀಕರಣಕ್ಕೆ ನಾಂದಿಹಾಡಿತ್ತು.