ಮಂಗಳೂರು: ದೇಶದಲ್ಲಿ ಮುಂಬರುವ ಹಬ್ಬದ ದಿನಗಳಲ್ಲಿ ಉಗ್ರರು ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಬಗ್ಗೆ ಗುಪ್ತಚರ ವರದಿಗಳು ಎಚ್ಚರಿಸಿದೆ. ರಾಜ್ಯ ಕರಾವಳಿಯಲ್ಲಿಯೂ ಸ್ಯಾಟಲೈಟ್ ಫೋನ್ ಕರೆ ರಿಂಗಣಿಸಿದ್ದು, ಉಗ್ರರ ಸ್ಲೀಪರ್ ಸೆಲ್ ಮಾಹಿತಿ ಹಿನ್ನೆಲೆ ಮತ್ತಷ್ಟು ಭದ್ರತೆ ಕೈಗೊಳ್ಳಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆ ಏರ್‌ಪೋರ್ಟ್ ಸುತ್ತಮುತ್ತಲೂ ಅಲರ್ಟ್ ಮಾಡಲಾಗಿದೆ.
ರಾಜ್ಯ ಕರಾವಳಿಯ ಮಂಗಳೂರು ಉಗ್ರರ ಟಾರ್ಗೆಟ್ ಆಗುತ್ತಿರುವ ಮಾಹಿತಿ ಗುಪ್ತಚರ ಇಲಾಖೆ ನೀಡಿದೆ. ಹಬ್ಬದ ದಿನಗಳಲ್ಲಿ ಉಗ್ರರು ವಿದ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ ಎಂಬ ವರದಿಗಳು ಬಂದಿದೆ. ಪ್ರಮುಖವಾಗಿ ಮಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು, ರೈಲ್ವೇ ನಿಲ್ದಾಣ, ಕ್ರೂಡ್ ಆಯಿಲ್ ಸಂಗ್ರಹಗಾರ, ಬೃಹತ್ ಕೈಗಾರಿಕೆಗಳಿದ್ದು, ಅತ್ಯಂತ ಸೂಕ್ಷ್ಮ ಪ್ರದೇಶಗಳು ಇಲ್ಲಿದೆ.
ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ನಿಗಾ
ಹೀಗಾಗಿ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ನಿಗಾವನ್ನು ಸ್ಥಳೀಯ ಪೊಲೀಸರು, ಕೇಂದ್ರ ಕೈಗಾರಿಕಾ ಭದ್ರತಾ ದಳದ ಅಧಿಕಾರಿ ಸಿಬ್ಬಂದಿಗಳು ಕೈಗೊಂಡಿದ್ದಾರೆ. ಮಂಗಳೂರು ಅಂತರಾಷ್ಟ್ರೀಯ ಏರ್‌ಪೋರ್ಟ್ ಸುತ್ತಮುತ್ತ ಅಲರ್ಟ್ ಮಾಡಲಾಗಿದ್ದು, ವಿಮಾನ ನಿಲ್ದಾಣ ವ್ಯಾಪ್ತಿಯ ಅದ್ಯಪಾಡಿ ಸುತ್ತಮುತ್ತಲಿನ ಪರಿಸರದ ಜನರಲ್ಲಿ ಅಲರ್ಟ್ ಆಗಿ ಇರುವಂತೆ ಜಾಗೃತಿ ಮೂಡಿಸಲಾಗಿದೆ.
ಗಾಳಿಯಲ್ಲಿ ಹಾರಾಡುವ ಆಟಿಕೆಗಳ ಬಳಕೆ ಬೇಡ
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, "ವಿಮಾನ ನಿಲ್ದಾಣದ ಭದ್ರತೆಯ ಹಿನ್ನಲೆಯಲ್ಲಿ ಈ ಕಾರ್ಯಗಾರ ಮಾಡಲಾಗಿದೆ. ವಿಮಾನ ನಿಲ್ದಾಣದ ಸುತ್ತಮುತ್ತ ವಾಸಿಸುವ ಜನರು ಗಾಳಿಯಲ್ಲಿ ಹಾರಾಡುವ ಆಟಿಕೆಗಳನ್ನು ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ. ಕೆಲ ತಿಂಗಳುಗಳ ಹಿಂದೆ ವಿಮಾನ ನಿಲ್ದಾಣ ರನ್‌ವೇನಲ್ಲಿ ಸ್ಥಳೀಯರು ಹಾರಿಸಿದ ಆಟಿಕೆಯ ಹೆಲಿಕಾಪ್ಟರ್ ಬಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಮತ್ತು ಅಪರಿಚಿತರಿಗೆ ಮನೆ ಬಾಡಿಗೆ ನೀಡುವಾಗಲೂ ಮುಂಜಾಗ್ರತೆ ವಹಿಸುವಂತೆ ಜನರಿಗೆ ಸೂಚನೆ ನೀಡಲಾಗಿದೆ," ಎಂದು ಕಮೀಷನರ್ ಮಾಹಿತಿ ನೀಡಿದ್ದಾರೆ.
ಗುಪ್ತಚರ ಇಲಾಖೆ ಅಲರ್ಟ್ ಆಗಿರುವಂತೆ ಸೂಚನೆ
"ಮಂಗಳೂರು ಏರ್‌ಪೋರ್ಟ್ ಭದ್ರತೆಯ ಸಿಐಎಸ್‌ಎಫ್ ಹಾಗೂ ಬಜ್ಪೆ ಪೊಲೀಸರಿಂದ ಸ್ಥಳೀಯರಿಗೆ ಜಾಗೃತಿ ಕಾರ್ಯ ಮಾಡಲಾಗಿದೆ. ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತು, ಡ್ರೋನ್ ಬಳಕೆ ಕಂಡು ಬಂದಲ್ಲಿ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಈಗಾಗಲೇ ಮಂಗಳೂರು ಏರ್‌ಪೋರ್ಟ್ ಸುತ್ತಮುತ್ತ ಬಿಗಿ ಭದ್ರತೆಯಿದ್ದರೂ, ಹಲವು ಬಾರಿ ಡ್ರೋನ್ ಹಾರಾಡಿದೆ. ಏರ್‌ಪೋರ್ಟ್ ಪರಿಸರದಲ್ಲಿ ಆಟಿಕೆ ಡ್ರೋನ್ ಸಹ ಹಾರಾಡಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಈ ರೀತಿಯ ಚಟುವಟಿಕೆ ನಡೆಸದಂತೆ ಹಾಗೂ ಕಂಡುಬಂದಲ್ಲಿ ತಿಳಿಸುವಂತೆ ಸೂಚಿಸಲಾಗಿದೆ. ಇನ್ನು ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದು, ಹೀಗಾಗಿ ಏರ್‌ಪೋರ್ಟ್ ಸುತ್ತಮುತ್ತಲೂ ಹೆಚ್ಚಿನ ನಿಗಾ ವಹಿಸಲಾಗಿದೆ," ಎಂದು ಎನ್. ಶಶಿಕುಮಾರ್ ತಿಳಿಸಿದರು.
ಮಂಗಳೂರಿನಲ್ಲಿ ಸ್ಯಾಟಲೈಟ್ ಫೋನ್ ಕರೆ ಸದ್ದು
ಕಾಶ್ಮೀರದ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಉಗ್ರರು ಡ್ರೋನ್ ದಾಳಿ ಮಾಡಲು ಯತ್ನಿಸಿದ್ದರು. ಆ ಬಳಿಕ ಸಿಐಎಸ್‌ಎಫ್, ಭದ್ರತಾ ಇಲಾಖೆ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಐಎಸ್‌ಎಫ್ ಯೋಧರಿಗೆ ಅಲರ್ಟ್ ಆಗಿರಲು ಸೂಚನೆ ನೀಡಲಾಗಿದೆ. ಅಲ್ಲದೇ ವಿಮಾನ ನಿಲ್ದಾಣದ ಸುತ್ತಮುತ್ತ ವಾಸಿಸುವ ನಾಗರಿಕರಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಜನರಿಗೆ ಡ್ರೋನ್ ಹಾರಾಟ ಕಂಡುಬಂದರೆ ಮಾಹಿತಿ ನೀಡಬೇಕು, ಅಲ್ಲದೇ ಅಪರಿಚಿತ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕೆಂದು ಹೇಳಲಾಗಿದೆ. ಒಟ್ಟಿನಲ್ಲಿ ಈಗಾಗಲೇ ಮಂಗಳೂರಿನಲ್ಲಿ ಸ್ಯಾಟಲೈಟ್ ಫೋನ್ ಕರೆ ಸದ್ದು ಮಾಡಿದೆ. ಇದರ ಜೊತೆ ಉಗ್ರ ಪರವಾದ ಚಟುವಟಿಕೆಗಳು ನಡೆದಿದೆ. ಹೀಗಾಗಿ ಮತ್ತಷ್ಟು ಭದ್ರತೆ ಕೈಗೊಳ್ಳಲಾಗಿದೆ. ಹೀಗಾಗಿ ಜನರು ಸಹ ಅಲರ್ಟ್ ಆಗಿ ಇರಬೇಕಾದ ಅಗತ್ಯವಿದೆ.