ಪೇಶಾವರ: ಇರಾನಿನ ನಾಯಕತ್ವದ ರೀತಿಯಲ್ಲಿ ಕಾಬೂಲ್‌ನಲ್ಲಿ ಹೊಸ ಸರ್ಕಾರ ರಚನೆಯನ್ನು ಘೋಷಿಸಲು ತಾಲಿಬಾನ್ ಸಜ್ಜಾಗಿದ್ದು, ತನ್ನ ಗುಂಪಿನ ಉನ್ನತ ಧಾರ್ಮಿಕ ಮುಖಂಡ ಮುಲ್ಲಾ ಹೆಬತುಲ್ಲಾ ಅಖುಂಡಜಾ ಅವರನ್ನು ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕನಾಗಲಿದ್ದಾರೆ ಎಂದು ತಾಲಿಬಾನ್ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.
"ಹೊಸ ಸರ್ಕಾರ ರಚನೆ ಸಂಬಂಧ ನಡೆದ ಸಮಾಲೋಚನೆಗಳು ಬಹುತೇಕ ಅಂತಿಮಗೊಂಡಿದ್ದು, ಕ್ಯಾಬಿನೆಟ್ ಬಗ್ಗೆಯಬ ಅಗತ್ಯ ಚರ್ಚೆಗಳನ್ನು ಸಹ ನಡೆಸಲಾಗಿದೆ" ಎಂದು ತಾಲಿಬಾನ್ ಮಾಹಿತಿ ಮತ್ತು ಸಂಸ್ಕೃತಿ ಆಯೋಗದ ಹಿರಿಯ ಅಧಿಕಾರಿ ಮುಫ್ತಿ ಇನಾಮುಲ್ಲಾ ಸಮಂಗಾನಿ ಅವರು ಬುಧವಾರ ತಿಳಿಸಿದ್ದಾರೆ.
ಮುಂದಿನ ಮೂರು ದಿನಗಳಲ್ಲಿ ಕಾಬೂಲ್‌ನಲ್ಲಿ ಹೊಸ ಸರ್ಕಾರ ರಚನೆ ಮಾಡುವುದನ್ನು ಘೋಷಿಸಲು ತಾಲಿಬಾನ್ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
60 ವರ್ಷದ ಮುಲ್ಲಾ ಅಖುಂಡಜಾದ ಅವರು ತಾಲಿಬಾನ್ ಸರ್ಕಾರದ ಸರ್ವೋಚ್ಚ ನಾಯಕರಾಗಿರುತ್ತಾರೆ. ಇದು ಇರಾನಿನ ನಾಯಕತ್ವದ ಮಾದರಿಯನ್ನು ಅನುಸರಿಸುತ್ತದೆ. ಇರಾನ್‌ನಲ್ಲಿ, ಸರ್ವೋಚ್ಚ ನಾಯಕ ದೇಶದ ಅತ್ಯುನ್ನತ ರಾಜಕೀಯ ಮತ್ತು ಧಾರ್ಮಿಕ ಅಧಿಕಾರ ಹೊಂದಿರುತ್ತಾರೆ. ಅವರು ಅಧ್ಯಕ್ಷರಿಗಿಂತ ಉನ್ನತ ಸ್ಥಾನದಲ್ಲಿರುತ್ತಾರೆ. ಮಿಲಿಟರಿ, ಸರ್ಕಾರ ಮತ್ತು ನ್ಯಾಯಾಂಗದ ಮುಖ್ಯಸ್ಥರನ್ನು ಅವರೇ ನೇಮಿಸುತ್ತಾರೆ.