ಉಡುಪಿ: ಉಡುಪಿಯ ಅಷ್ಟಮಠಗಳ ಪೈಕಿ ಒಂದಾಗಿರುವ ಶಿರೂರು ಮಠಕ್ಕೆ ಬಾಲ ಸನ್ಯಾಸಿ ನೇಮಕ ಮಾಡಿರುವುದನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದ್ದು, ಅಪ್ರಾಪ್ತರು ಸ್ವಾಮಿಯಾಗಬಾರದು ಎಂಬುದಕ್ಕೆ ಕಾನೂನಿನ ತೊಡಕು ಇಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ಶಿರೂರು ಮಠದ ಪೀಠಾಧಿಪತಿಯನ್ನಾಗಿ 16 ವರ್ಷದ ಅನಿರುದ್ಧ್ ಸರಳತ್ತಾಯ (ಈಗ ವೇದವರ್ಧನ ತೀರ್ಥ) ರನ್ನು ನೇಮಕ ಮಾಡಿದ್ದರ ಸಿಂಧುತ್ವ ಪ್ರಶ್ನಿಸಿ ಶಿರೂರು ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ. ಲಾತವ್ಯ ಆಚಾರ್ಯ ಸೇರಿ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ತಿರಸ್ಕರಿಸಿ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ತೀರ್ಪು ನೀಡಿದೆ.
"ಬೌದ್ಧ ಧರ್ಮದಲ್ಲಿ ಅತ್ಯಂತ ಚಿಕ್ಕ ವಯಸ್ಸಿಗೆ ಮಕ್ಕಳು ಭಿಕ್ಕುಗಳಾಗುತ್ತಾರೆ. ಯಾವ ವಯಸ್ಸಿನಲ್ಲಿ ಸನ್ಯಾಸಿಯಾಗಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮವಿಲ್ಲ. 18 ವರ್ಷಕ್ಕಿಂತ ಚಿಕ್ಕವರು ಸನ್ಯಾಸಿಗಳಾಗಬಾರದು ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಶಾಸನಬದ್ಧ ಕಾನೂನು ಇಲ್ಲ. 18 ವರ್ಷವಾಗುವುದಕ್ಕೂ ಮುಂಚಿತವಾಗಿ ಸನ್ಯಾಸಿಯಾಗಲು ಧರ್ಮದಲ್ಲಿ ಅವಕಾಶವಿದೆ ಎಂಬುದನ್ನು ಅಮಿಕಸ್ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ ) ಎಸ್. ಎಸ್. ನಾಗಾನಂದ್ ವಿಸ್ತೃತವಾಗಿ ವಿವರಿಸಿದ್ದಾರೆ."
"ಹೀಗಾಗಿ, ಅದಕ್ಕೆ ಯಾವುದೇ ನಿರ್ಬಂಧವಿಲ್ಲ. ಪ್ರಮುಖವಾದ ಧಾರ್ಮಿಕ ಚಟುವಟಿಕೆಗಳ ದೃಷ್ಟಿಯಿಂದ ಶಿರೂರುಮಠಕ್ಕೆ ಪೀಠಾಧಿಪತಿ ನೇಮಕ ಮಾಡುವ ಅಧಿಕಾರ ಸೋದೆ ವಾದಿರಾಜ ಮಠದ ಪೀಠಾಧಿಪತಿಗೆ ಇದೆ. ಈ ವಿಚಾರದಲ್ಲಿ ನ್ಯಾಯಾಲಯವು ಮಧ್ಯ ಪ್ರವೇಶ ಮಾಡಲಾಗದು. ಅದಾಗ್ಯೂ, ಧಾರ್ಮಿಕ ವಿಧಿವಿಧಾನ ಮತ್ತು ಧರ್ಮದಲ್ಲಿ ಅಸ್ತಿತ್ವದಲ್ಲಿರುವ ನಂಬಿಕೆಗಳು ಎಲ್ಲಿಯವರೆಗೆ ವ್ಯಕ್ತಿಯ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲವೋ ಅಲ್ಲಿಯವರೆಗೆ ಅವುಗಳನ್ನು ಪಾಲಿಸುವ ಹೊಣೆಗಾರಿಕೆ ಇದೆ," ಎಂದು ಹೈಕೋರ್ಟ್ ವಿಭಾಗೀಯ ಪೀಠವು ತನ್ನ ಆದೇಶದಲ್ಲಿ ಹೇಳಿದೆ.
"ಹಾಲಿ ಪ್ರಕರಣದಲ್ಲಿ ಬಹುಮಖ್ಯ ಧಾರ್ಮಿಕ ನಂಬಿಕೆಗಳ ಪ್ರಕಾರ ಶಿರೂರು ಮಠವು ಧಾರ್ಮಿಕ ವರ್ಗವಾಗಿದ್ದು, ಏಳನೇ ಪ್ರತಿವಾದಿಯಾದ ಅನಿರುದ್ಧ್ ಸರಳತ್ತಾಯ ಸನ್ಯಾಸಿಯಾಗಿದ್ದಾರೆ. ಅವರನ್ನು ಶಿರೂರು ಮಠದ ಪೀಠಾಧಿಪತಿಯಾಗಿ ನೇಮಿಸಲಾಗಿದೆ. ಹೀಗಿರುವಾಗ ಮಠದ ಬಹುಮುಖ್ಯ ಧಾರ್ಮಿಕ ನಂಬಿಕೆಗಳು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ಊಹಿಸಿಕೊಳ್ಳಲಾಗದು," ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
"ಯಾವುದೇ ರೀತಿಯಲ್ಲಿಯೂ ಅನಿರುದ್ಧ್ ಸರಳತ್ತಾಯರನ್ನು ಪೀಠಾಧಿಪತಿಯನ್ನಾಗಿ ನೇಮಿಸಿರುವುದನ್ನು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಹೇಳಲಾಗದು. ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂಬುದರತ್ತ ಬೊಟ್ಟು ಮಾಡುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ. ಈ ಪರಂಪರೆಯು 800 ವರ್ಷಗಳಿಂದ ನಡೆದುಕೊಂಡು ಬಂದಿದೆ," ಎಂದಿರುವ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿದೆ.
ಕಳೆದ ಗುರುವಾರ ಸುದೀರ್ಘವಾಗಿ ನಾಲ್ಕು ಗಂಟೆಗಳ ವಾದ- ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಪೀಠವು ತೀರ್ಪು ಕಾಯ್ದಿರಿಸಿತ್ತು. ಅರ್ಜಿದಾರರ ಪರವಾಗಿ ವಾದಿಸಿದ್ದ ವಕೀಲ ಡಿ. ಆರ್. ರವಿಶಂಕರ್, "ಅಪ್ರಾಪ್ತರಿಗೆ ಸನ್ಯಾಸವನ್ನು ಹೇರುವುದರಿಂದ ಅವರು ಐಹಿಕ ಭೋಗಗಳನ್ನು ಪರಿತ್ಯಾಗ ಮಾಡಬೇಕಾಗುತ್ತದೆ. ಇದು ಸಂವಿಧಾನದ 21 ಮತ್ತು 39 (ಇ) ಮತ್ತು (ಎಫ್) ವಿಧಿಯ ಉಲ್ಲಂಘನೆಯಾಗುತ್ತದೆ," ಎಂದಿದ್ದರು.
ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಎಸ್. ಎಸ್. ನಾಗಾನಂದ್, "18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸನ್ಯಾಸ ದೀಕ್ಷೆ ನೀಡುವುದಕ್ಕೆ ಯಾವುದೇ ಶಾಸನಬದ್ಧ, ಸಂವಿಧಾನಬದ್ಧವಾದ ನಿರ್ಬಂಧವಿಲ್ಲ ಮತ್ತು ಅದು ಅಪಾಯಕರ ಅಭ್ಯಾಸವಲ್ಲ," ಎಂದು ಪೀಠಕ್ಕೆ ವಿವರಿಸಿದ್ದರು.
"ಉಡುಪಿಯ ಅಷ್ಟಮಠಗಳಲ್ಲಿ ಬ್ರಹ್ಮಚಾರಿ, ಅವಿವಾಹಿತರಿಗೆ ಮಾತ್ರ ಸನ್ಯಾಸ ದೀಕ್ಷೆ ನೀಡುವ ಪರಂಪರೆಯಿದೆ. ಇದರ ಜೊತೆಗೆ ಪೀಠಾಧಿಪತಿಯಾಗುವವರ ಕೌಟುಂಬಿಕ ಹಿನ್ನೆಲೆ, ಶಾಸ್ತ್ರೀಯ ಅಧ್ಯಯನದ ಕಡೆಗಿನ ಅವರ ಒಲವು, ಜಯತೀರ್ಥ ರಚಿಸಿರುವ ಶ್ರೀಮನ್ ನ್ಯಾಯಸುಧಾ ಅಧ್ಯಯನ ಮಾಡುವ ಶಕ್ತಿ ಹೊಂದಿರುವುದು ಮತ್ತು ಮಧ್ವಾಚಾರ್ಯರ ತತ್ವಗಳನ್ನು ಪ್ರತಿಪಾದಿಸುವುದನ್ನು ವಿಶೇಷವಾಗಿ ಗಮನಿಸಲಾಗುತ್ತದೆ. ಇದರ ಜೊತೆಗೆ ಪೀಠದ ಮಠಾಧಿಪತಿ ಸ್ಥಾನಕ್ಕೆ ಅವರು ಹೊಂದುತ್ತಾರೆಯೇ ಎಂಬುದನ್ನು ಅವರ ಜಾತಕ ಪರಿಶೀಲಿಸುವ ಮೂಲಕ ಖಾತರಿಪಡಿಸಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪೀಠಾಧಿಪತಿ ಸ್ಥಾನಕ್ಕೆ ಪರಿಗಣಿಸಲ್ಪಟ್ಟವರು 18 ವರ್ಷಕ್ಕಿಂತ ಚಿಕ್ಕವರಾದರೆ ಅದು ಕಾಕತಾಳೀಯವಷ್ಟೆ," ಎಂದು ಹೇಳಿದ್ದರು.
ಶಿರೂರು ಮಠಕ್ಕೆ ಪೀಠಾಧಿಪತಿಯನ್ನು ನೇಮಿಸುವ ಅಧಿಕಾರ ಸೋದೆ ವಾದಿರಾಜ ಮಠಕ್ಕೆ ಇದೆಯೇ ಎಂಬ ಅರ್ಜಿದಾರರ ಪ್ರಶ್ನೆಗೆ ಅಮಿಕಸ್ ಕ್ಯೂರಿ ನಾಗಾನಂದ್, "1917ರಲ್ಲೇ ಮದ್ರಾಸ್ ಹೈಕೋರ್ಟ್ ದ್ವಂದ್ವ ಮಠ ವ್ಯವಸ್ಥೆಯನ್ನು ಪರಿಗಣಿಸಿದೆ. ಈ ಸಂಪ್ರದಾಯದ ಪ್ರಕಾರ ದ್ವಂದ್ವ ಮಠದ ಪೈಕಿ ಒಂದು ಮಠದ ಮುಖ್ಯ ಪೀಠಾಧಿಪತಿ ತಮ್ಮ ಉತ್ತರಾಧಿಕಾರಿಯನ್ನು ಗುರುತಿಸದೇ ನಿಧನರಾದರೆ ಮತ್ತೊಂದು ಮಠದ ಮುಖ್ಯ ಪೀಠಾಧಿಪತಿಯು ಸದರಿ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವ ಅಧಿಕಾರ ಹೊಂದಿರುತ್ತಾರೆ," ಎಂದು ವಿವರಿಸಿದ್ದರು.
"ಭಾರತೀಯ ಪ್ರೌಢಾವಸ್ಥೆ ಕಾಯಿದೆ ಪ್ರಕಾರ 18 ವರ್ಷದವರನ್ನು ಪ್ರಾಪ್ತ ವಯಸ್ಕರು ಎನ್ನಲಾಗುತ್ತದೆ. ಆದರೆ, ಧಾರ್ಮಿಕ ವಿಷಯಗಳಿಗೆ ಬಂದಾಗ 14 ವರ್ಷ ವಯಸ್ಸನ್ನು ಪರಿಗಣಿಸಲಾಗುತ್ತದೆ. ಶಾಸ್ತ್ರಗಳು ಹಾಗೂ ಶ್ಲೋಕಗಳ ಪ್ರಕಾರ 14 ವರ್ಷದ ದಾಟಿದವರು ವೈರಾಗ್ಯ ನಿರ್ಧಾರ ಕೈಗೊಳ್ಳಬಹುದು. ಬೌದ್ಧ ಧರ್ಮದವರಲ್ಲಿ ಚಿಕ್ಕ ಮಕ್ಕಳಿಗೇ ಸನ್ಯಾಸ ನೀಡಲಾಗುತ್ತದೆ. ಶಿರೂರು ಮಠಕ್ಕೆ ಮಠಾಧಿಪತಿ ಆಗಿರುವವರಿಗೆ 17 ವರ್ಷ. ತಂದೆ ಡಾಕ್ಟರೇಟ್ ಪಡೆದಿದ್ದು, ತಾಯಿಯೂ ವಿದ್ಯಾವಂತೆ. ಮಗನಿಗೂ ವಿರಕ್ತಿಯಲ್ಲಿ ಆಸಕ್ತಿಯಿದೆ. ಆ ಪ್ರಕಾರವೇ ಸನ್ಯಾಸ ದೀಕ್ಷೆ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಲೋಪವೇನೂ ಆಗಿಲ್ಲ," ಎಂದು ಹೇಳಿದ್ದರು.