ವಾಷಿಂಗ್ಟನ್: 'ಭಾರತ ಮತ್ತು ಅಮೆರಿಕವು ತಮ್ಮ ಪ್ರಜಾಸತ್ತಾತ್ಮಕ ನೀತಿಗಳು ಮತ್ತು ಸಂಸ್ಥೆಗಳನ್ನು ರಕ್ಷಿಸಿಕೊಳ್ಳಬೇಕು' ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜತೆ ನಡೆದ ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ. 'ವಿಶ್ವದ ಎಲ್ಲೆಡೆ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಈ ಅಪಾಯವನ್ನು ತಡೆಗಟ್ಟಲು, ನಮ್ಮ ನಮ್ಮ ದೇಶಗಳಲ್ಲಿ ಪ್ರಜಾಸತ್ತಾತ್ಮಕ ನೀತಿಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ರಕ್ಷಿಸಿಕೊಳ್ಳುವ ತುರ್ತು ಅಗತ್ಯವಿದೆ' ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಹ್ಯಾರಿಸ್ ಅವರು ಹವಾಮಾನ ವೈಪರೀತ್ಯ, ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶ ಮತ್ತು ಅಫ್ಗಾನಿಸ್ತಾನದಲ್ಲಿನ ಈಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ.
'ನಮ್ಮ ನಮ್ಮ ದೇಶಗಳಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ನಾವೆಲ್ಲಾ ಏನು ಮಾಡಬೇಕು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಜನರ ಹಿತಾಸಕ್ತಿಗಾಗಿ ಇದನ್ನು ನಾವು ಮಾಡಲೇಬೇಕಿದೆ' ಎಂದು ಅವರು ಪ್ರತಿಪಾದಿಸಿದ್ದಾರೆ.
'ಪ್ರಜಾಪ್ರಭುತ್ವದ ಬಗ್ಗೆ ಭಾರತೀ ಯರ ಬದ್ಧತೆ ಎಂಥದ್ದು ಎಂಬುದನ್ನು ಸ್ವತಃ ನನ್ನ ಕುಟುಂಬದವರನ್ನು ನೋಡಿ, ಅರ್ಥೈಸಿಕೊಂಡಿದ್ದೇನೆ. ಪ್ರಜಾಸತ್ತಾತ್ಮಕ ನೀತಿಗಳು ಮತ್ತು ಸಂಸ್ಥೆಗಳನ್ನು ಕಾಪಾಡಿಕೊಳ್ಳಲು ಏನೆಲ್ಲಾ ಮಾಡಬೇಕು ಎಂಬುದು ನನಗೆ ಗೊತ್ತಿದೆ' ಎಂದು ಅವರು ಹೇಳಿದ್ದಾರೆ. ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಗೋಪಾಲನ್ ಅವರು ಚೆನ್ನೈನಲ್ಲಿ ನಾಗರಿಕ ಹಕ್ಕುಗಳ ಹೋರಾಟಗಾರರಾಗಿದ್ದರು.
2020ರ ಪ್ರಜಾಪ್ರಭುತ್ವ ಸೂಚಿ ಯಲ್ಲಿ ಭಾರತವು 51ನೇ ಸ್ಥಾನದಿಂದ 53ನೇ ಸ್ಥಾನಕ್ಕೆ ಕುಸಿದಿತ್ತು. ಭಾರತವು ಪ್ರಜಾಸತ್ತಾತ್ಮಕ ನೀತಿಗಳು ಮತ್ತು ಸಂಸ್ಥೆಗಳನ್ನು ರಕ್ಷಿಸಬೇಕು ಎಂಬ ಕಮಲಾ ಅವರ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರು, 'ಭಾರತ ಮತ್ತು ಅಮೆರಿಕವು ತಮ್ಮ ಪ್ರಜಾಪ್ರಭುತ್ವವನ್ನು ಉತ್ತಮ ಮಟ್ಟದಲ್ಲಿ ಕಾಯ್ದುಕೊಳ್ಳುತ್ತಿವೆ ಎಂದು ಅಮೆರಿಕದ ಕಾಂಗ್ರೆಸ್ ಪ್ರಶಂಸೆ ನೀಡಿದೆ. ಸಭೆಯಲ್ಲಿ ನಡೆದದ್ದು ಇದೇ ಚರ್ಚೆ, ಮಾಧ್ಯಮಗಳಿಗೆ ಅಲ್ಲಿ ಪ್ರವೇಶವಿರಲಿಲ್ಲ' ಎಂದು ಅವರು ಹೇಳಿದ್ದಾರೆ.
ಕೋವಿಡ್ ಲಸಿಕೆ ತಯಾರಿಕೆಯಲ್ಲಿ ಭಾರತವು ವಹಿಸಿರುವ ಮಹತ್ವದ ಪಾತ್ರವನ್ನು ಹ್ಯಾರಿಸ್ ಶ್ಲಾಘಿಸಿದ್ದಾರೆ. ಈ ಹಿಂದೆ, ಮೋದಿ ಅವರ ಜತೆ ಫೋನ್‌ನಲ್ಲಿ ನಡೆಸಿದ ಮಾತುಕತೆಯನ್ನು ಅವರು ಈ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ಒಟ್ಟಿಗಿರಬೇಕಾದ ಅಗತ್ಯದ ಬಗ್ಗೆ ಅವರು ಮಾತನಾಡಿದ್ದಾರೆ.