ನವದೆಹಲಿ :ಕೇರಳ ಆಡಳಿತಾತ್ಮಕ ಟ್ರಿಬ್ಯುನಲ್ ಅಧ್ಯಕ್ಷರಾಗಿ ಕೇರಳ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಸಿ ಕೆ ಅಬ್ದುಲ್ ರಹೀಂ ಅವರನ್ನು ರಾಷ್ಟ್ರಪತಿಗಳು ನೇಮಕಗೊಳಿಸಿದ್ದಾರೆ. ಅವರು ಈ ಹುದ್ದೆಯಲ್ಲಿ ನಾಲ್ಕು ವರ್ಷಗಳ ಅವಧಿಗೆ ಅಥವಾ ಅವರಿಗೆ 70 ವರ್ಷ ತುಂಬುವ ತನಕ ಸೇವೆ ಸಲ್ಲಿಸಲಿದ್ದಾರೆ.
ಕೇರಳ ಆಡಳಿತಾತ್ಮಕ ಟ್ರಿಬ್ಯುನಲ್ ಅಡ್ವಕೇಟ್ಸ್ ಅಸೋಸಿಯೇಶನ್ ಇತ್ತೀಚೆಗೆ ಹೈಕೋರ್ಟ್ ಮೆಟ್ಟಿಲೇರಿ ಜುಲೈ 19, 2021ರಂದು ತಮ್ಮ ಮೊದಲ ಅವಧಿ ಪೂರೈಸಿರುವ ಈಗಿನ ನ್ಯಾಯಾಂಗ ಸದಸ್ಯರ ಸೇವಾವಧಿ ವಿಸ್ತರಿಸುವಂತೆ ಹಾಗೂ ಹೊಸ ಅಧ್ಯಕ್ಷರನ್ನು ನೇಮಕಗೊಳಿಸಲು ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಕೇರಳ ಆಡಳಿತಾತ್ಮಕ ಟ್ರಿಬ್ಯುನಲ್‍ಗೆ ಅಧ್ಯಕ್ಷರನ್ನು ತಕ್ಷಣ ನೇಮಕಗೊಳಿಸಬೇಕೆಂಬ ಕೋರ್ಟ್ ಆದೇಶಕ್ಕೆ ಮನ್ನಣೆ ನೀಡದೇ ಇದ್ದ ಕೇಂದ್ರ ಸರಕಾರವನ್ನು ಇತ್ತೀಚೆಗೆ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ಆಯಾಯ ರಾಜ್ಯದ ರಾಜ್ಯಪಾಲರೊಂದಿಗೆ ಸಮಾಲೋಚಿಸಿ ರಾಷ್ಟ್ರಪತಿಗಳು ಆಡಳಿತಾತ್ಮಕ ಟ್ರಿಬ್ಯೂನಲ್‍ಗಳಿಗೆ ನೇಮಕಾತಿಗಳನ್ನು ಮಾಡುವುದು ಸಂಪ್ರದಾಯವಾಗಿದೆ.