ಮಂಜೇಶ್ವರ: ಕಾಸರಗೋಡು ತಾಲೂಕು ಬೀಡಿ ಕಾರ್ಮಿಕರ ಯೂನಿಯನ್ (ಎ ಐ ಟಿ ಯು ಸಿ) ಕಾಮ್ರೇಡ್ ಟಿ ವಿ ಥೋಮಸ್ ರವರ ಸ್ಮರಣಾರ್ಥ ಮಂಜೇಶ್ವರದ ಡಾ. ಎ. ಸುಬ್ಬರಾವ್ ಸರ್ಕಲಿನ ಸಮೀಪದಲ್ಲಿ ನೂತನವಾಗಿ ನಿರ್ಮಾಣಗೊಂಡ ಯೂನಿಯನ್ ನ ಕಚೇರಿ ಕಟ್ಟಡದ ಉದ್ಘಾಟನೆ ಬುಧವಾರ ಬೆಳಿಗ್ಗೆ ನಡೆಯಿತು.
ಮಂಗಳೂರು ಕೇಂದ್ರವಾಗಿ ಕಾರ್ಯಾಚರಿಸುತಿದ್ದ ಕರ್ನಾಟಕ ಖಾಸಗೀ ಬೀಡಿ ಕಂಪನಿಗಳು ಕೇರಳ ಸರ್ಕಾರ ಘೋಷಿಸಿದ ಕನಿಷ್ಟ ವೇತನ ನೀಡಲು ತಯಾರಾಗದೆ ಸಂಸ್ಥೆ ಮುಚ್ಚಿದಾಗ ನೌಕರಿ ನಷ್ಟವಾಗಿ ಸಂಕಷ್ಟ ಅನುಭವಿಸುತ್ತಿರುವ ಕಣ್ಣೂರು, ಕಾಸರಗೋಡು, ಕೋಝಿಕ್ಕೋಡು ವಲಯದ ಬಿಡಿ ಕಾರ್ಮಿಕರಿಗೆ ಬೆನ್ನೆಲುಬಾಗಿ ನಿಂತು ವ್ಯವಸಾಯವನ್ನು ಹಾಗೂ ಕಾರ್ಮಿಕರನ್ನು ಸಂರಕ್ಷಿಸಿದ ಅಂದಿನ ಸಚಿವರೂ ಆಗಿದ್ದ ನೇತಾರ ಟಿ ವಿ ಥೋಮಸ್ ರವರ ನೆನಪು ಕಟ್ಟಡ ಲೋಕಾರ್ಪಣೆಗೊಳುವುದರೊಂದಿಗೆ ಮಂಜೇಶ್ವರದಲ್ಲಿ ಅಮರವಾಗಿ ಉಳಿಯಲಿದೆ.
ಕಾಸರಗೋಡು ಜಿಲ್ಲಾ ಸಿಪಿಐ ನಿರ್ವಾಹಕ ಸಮಿತಿ ಅಧ್ಯಕ್ಷ ಹಾಗೂ ಸಹಕಾರೀ ಬ್ಯಾಂಕ್ ನಿರ್ದೇಶಕ ಬಿ ವಿ ರಾಜನ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನೂತನ ಕಟ್ಟಡವನ್ನು ಸಿಪಿಐ ಕೇರಳ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಲೋಕಾರ್ಪಣೆಗೊಳಿಸಿದರು. ಬೀಡಿ ಕಾರ್ಮಿಕ ಸಂಘಟನೆ ಅಧ್ಯಕ್ಷ ಸಂಜೀವ ಶೆಟ್ಟಿ ವರದಿ ಮಂಡಿಸಿದರು.
ಬಳಿಕ ಮಾತನಾಡಿದ ಕಾನಂ ರಾಜೇಂದ್ರ ಅವರು, ಬಹಳ ವರ್ಷಗಳ ಬೀಡಿ ಕಾರ್ಮಿಕ ಯೂನಿಯನ್ ನ ಪರಿಶ್ರಮದ ಫಲವಾಗಿ ಇಂದು ಟಿ ವಿ ಥೋಮಸ್ ಸ್ಮಾರಕ ಕಟ್ಟಡವನ್ನು ಉದ್ಘಾಟಿಸಲು ಸಾಧ್ಯವಾಗಿದೆ. ನಿಮ್ಮೆಲ್ಲರ ಸಂತೊಷದಲ್ಲಿ ಭಾಗಿಯಾಗಿಕೊಂಡು ಉದ್ಘಾಟನೆ ನೆರವೇರಿಸುವುದಾಗಿ ತಿಳಿಸಿದ ಅವರು ಮಂಜೇಶ್ವರದ ಕಾರ್ಮಿಕರ ಸಂಘಟನೆಗೆ ಕಾರ್ಮಿಕರ ಏಳಿಗೆಗಾಗಿ ಹೋರಾಟ ನಡೆಸಿದ ಇತಿಹಾಸವಿದೆ. ರಾಷ್ಟ್ರ ಮಟ್ಟದ ಸಂಘಟನೆಯಿಂದ ಆರಂಭಗೊಂಡು ಬಹುತೇಕ ಚಳವಳಿಗಳಲ್ಲೂ ಅನ್ಯಾಯದ ವಿರುದ್ದ ಧ್ವನಿ ಎತ್ತಿದ ಜನರ ನಾಡಾಗಿದೆ ಮಂಜೇಶ್ವರ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ ವಿ ರಾಜನ್ ರವರು ಸುದೀರ್ಘವಾದ ಅಡಳಿತಾವಧಿಯಲ್ಲೂ ಸ್ವಂತಕ್ಕಾಗಿ ಸರ್ಕಾರದಿಂದ ಸಿಗುವ ಭೂಮಿಗಾಗಿ ಆಸೆಪಡದೆ ಅದಕ್ಕಾಗಿ ಅರ್ಜಿಗಳನ್ನು ಹಾಕದೆ ಅಂತಹ ಭೂಮಿಯನ್ನು ಸ್ವಾಧೀನಪಡಿಸಲು ಕೂಡಾ ಮುಂದಾಗದೇ ಅರ್ಹರಾದ ಕುಟುಂಬಗಳಿಗೆ ಸರ್ಕಾರಿ ಭೂಮಿಯನ್ನು ನೀಡಲು ಪ್ರಯತ್ನಿಸಿದ ಪಕ್ಷವಾಗಿದೆ ಮಂಜೇಶ್ವರ ಮಂಡಲದ ಸಿಪಿಐ ಪಕ್ಷ. ಎಐಟಿಯುಸಿ ಕಾರ್ಮಿಕರು ಬೆವರು ಸುರಿಸಿ ದುಡಿದ ಹಣದಿಂದ ಖರೀದಿಸಿದ ಸ್ಥಳದಲ್ಲಿ ಇಂದು ಟಿ ವಿ ಥೋಮಸ್ ಸ್ಮಾರಕ ಕಟ್ಟಡ ತಲೆ ಎತ್ತಲು ಸಾಧ್ಯವಾಗಿದೆ. ಹೊರತು ನಾವು ಎಲ್ಲಿಯೂ ಉಚಿತವಾಗಿ ಸ್ಥಳವನ್ನು ಪಡೆಯಲು ಹೋಗಲಿಲ್ಲವೆಂದು ತಿಳಿಸಿದರು.
ಎ ಐ ಟಿ ಯು ಸಿ ರಾಜ್ಯ ಸಮಿತಿ ಕಾರ್ಯದರ್ಶಿ ಪಿ ಮುರಳಿ ಅವರು ಭಾವಚಿತ್ರ ಅನಾವರಣಗೊಳಿಸಿದರು. ಕಟ್ಟಡವನ್ನು ಉತ್ತಮವಾಗಿ ನಿರ್ಮಿಸಿಕೊಟ್ಟ ಇಂಜಿನೀಯರ್ ಕೆ ಸಿ ರಮೇಶ್, ಸಹಾಯಕರಾದ ಜಗನ್, ಬಾನು ವಿಕ್ರಂ ಹಾಗೂ ಟಿ ವಿ ಥೋಮಸ್ ಹಾಗೂ ಕಾನಂ ರಾಜೆಂದ್ರರವರ ಚಿತ್ರವನ್ನು ಬಿಡಿಸಿದ ಅಧ್ವಿತ್ ಮಾಡ ಎಂಬವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪಿಲ್, ಎ ಐ ಟಿ ಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ಟಿ ಕೃಷ್ಣ, ಸಿಪಿಐ ಮಂಜೇಶ್ವರ ಲೋಕಲ್ ಸಮಿತಿ ಕಾರ್ಯದರ್ಶಿ ಶ್ರೀಧರ್ ಆರ್ ಕೆ, ಮೀಂಜ ಪಂ. ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಉಪಾಧ್ಯಕ್ಷ ಜಯರಾಂ ಬಲ್ಲಂಗುಡೇಲ್, ನೇತಾರರಾದ ಎಸ್ ರಾಮಚಂದ್ರ, ಬಿ.ಎಂ.ಅನಂತ, ಅಜಿತ್ ಎಂ ಸಿ, ಗಂಗಾಧರ, ದಯಾಕರ ಮಾಡ ಮೊದಲಾದವರು ಶುಭ ಹಾರೈಸಿದರು.