ಲಖನೌ: ಅಖಿಲ ಭಾರತೀಯ ಅಖಾಡ ಪರಿಷತ್ ನ ಅಧ್ಯಕ್ಷರಾಗಿದ್ದ ಮಹಾಂತ್ ನರೇಂದ್ರ ಗಿರಿ ಅವರು ನಿಗೂಢವಾಗಿ ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ನೇಣು ಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಊಹಾಪೋಹಗಳು ಎದ್ದಿದ್ದು, ಇದನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ಕೂಡ ವಹಿಸಿದೆ.
ಈ ನಡುವೆಯೇ ಸ್ವಾಮೀಜಿ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್ ಒಂದು ಸಿಕ್ಕಿತ್ತು. ಅದರಲ್ಲಿ ಅವರು ತಮ್ಮ ಶಿಷ್ಯ ಆನಂದಗಿರಿ ತಮಗೆ ಹಿಂಸೆ ನೀಡುತ್ತಿರುವ ಬಗ್ಗೆ ಉಲ್ಲೇಖಿಸಿದ್ದರು. ಯುವತಿಯೊಬ್ಬಳ ತಿರುಚಿದ ಫೋಟೋ ಒಂದನ್ನು ತಮ್ಮ ಫೋಟೋ ಜತೆ ಸೇರಿಸಿ ತಮಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಈ ನಕಲಿ ಫೋಟೋ ಅನ್ನು ಹರಿಬಿಡುವುದಾಗಿ ಹೆದರಿಸುತ್ತಿದ್ದಾರೆ, ಸಮಾಜದಲ್ಲಿ ಮರ್ಯಾದೆಯಿಂದ ಇರುವ ವ್ಯಕ್ತಿಯಾಗಿರುವ ನಾನು ಇದನ್ನು ಸಹಿಸಲಾರೆ ಎಂದು ಅದರಲ್ಲಿ ಉಲ್ಲೇಖವಾಗಿತ್ತು.
ಆದರೆ ಇದನ್ನು ಆನಂದಗಿರಿ ತಳ್ಳಿಹಾಕಿದ್ದರು. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಯಾರೋ ಕೊಲೆ ಮಾಡಿದ್ದಾರೆ. ಸ್ವಾಮೀಜಿಗೆ ಪತ್ರ ಬರೆಯುವ ಹವ್ಯಾಸ ಇರಲಿಲ್ಲ. ಇದು ಅವರ ಅಕ್ಷರವೂ ಅಲ್ಲ ಎಂದಿದ್ದರು. ಆದ್ದರಿಂದ ಈ ಸಾವಿನ ರಹಸ್ಯ ಕಗ್ಗಂಟಾಗಿಯೇ ಉಳಿದಿತ್ತು.
ಅದರೆ ಇದೀಗ ಇದು ಮಹತ್ವದ ತಿರುವು ಪಡೆದುಕೊಂಡಿದ್ದು, ಸ್ವಾಮೀಜಿ ಸಾವಿಗೂ ಕೆಲವೇ ಕ್ಷಣಗಳ ಮುನ್ನ ಮಾಡಿದ್ದಾರೆ ಎನ್ನಲಾದ ವಿಡಿಯೋ ಒಂದು ತನಿಖಾಧಿಕಾರಿಗಳಿಗೆ ಸಿಕ್ಕಿದೆ.
ನರೇಂದ್ರ ಗಿರಿ ಅವರ ಮೊಬೈಲ್ ಫೋನ್ ವಶಪಡಿಸಿಕೊಂಡ ನಂತರ ಇದು ಸಿಬಿಐ ಅಧಿಕಾರಿಗಳಿಗೆ ಸಿಕ್ಕಿದೆ. ಇದರಲ್ಲಿ ಕೂಡ ಅವರು ಆನಂದಗಿರಿಯ ಉಲ್ಲೇಖ ಮಾಡಿದ್ದಾರೆ. 2020 ರಲ್ಲಿ ಮಾಡಿದ ನಾನು ಮಠದ ವಿಲ್ ಮಾಡಿದ್ದೆ. ಅದರ ಬದಲಾವಣೆ ಮಾಡುವಂತೆ ತಮ್ಮ ಮೇಲೆ ಒತ್ತಡವಿತ್ತು. ಆನಂದ ಗಿರಿ, ಆದ್ಯ ತಿವಾರಿ, ಸಂದೀಪ್ ತಿವಾರಿ ಎಂಬ ಮೂವರ ವಿರುದ್ಧ ಮಾನಸಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ ಎನ್ನಲಾಗಿದೆ.
2 ನಿಮಿಷಗಳ ವಿಡಿಯೋ ಇದಾಗಿದೆ. ಅದರಲ್ಲಿ ಸ್ವಾಮೀಜಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಅದಕ್ಕೆ ಆನಂದಗಿರಿ ಕಾರಣ ಎಂದಿದ್ದಾರೆ. ಇವರ ಜತೆ ಆದ್ಯ ತಿವಾರಿ ಹಾಗೂ ಆತನ ಪುತ್ರ ಸಂದೀಪ್ ಕೂಡ ಕಾರಣ, ಈ ಮೂವರ ವಿರುದ್ಧವೂ ಆಡಳಿತ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದ್ದಾರೆ. ಜತೆಗೆ ಮಹಿಳೆಯರೊಂದಿಗೆ ಇರುವ ರೀತಿಯ ತಿರುಚಿದ ಚಿತ್ರಗಳನ್ನು ಹರಿಯ ಬಿಡಲು ಆನಂದಗಿರಿ ಯೋಜಿಸುತ್ತಿದ್ದ ಎಂಬ ಮಾಹಿತಿಯನ್ನು ಕೂಡ ಆಡಿಯೋದಲ್ಲಿ ಹೇಳಲಾಗಿದೆ.
ಸೆ.13 ರಂದೇ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಯತ್ನಿಸಿದ್ದೆ. ಆದರೆ ಧೈರ್ಯ ಸಾಲಲಿಲ್ಲ. ಆದರೆ ಇಂದು ನನಗೆ ಸಿಕ್ಕ ಮಾಹಿತಿಯ ಪ್ರಕಾರ ಒಂದು ಅಥವಾ ಎರಡು ದಿನಗಳಲ್ಲಿ ಆನಂದ ಗಿರಿ ನಾನು ಮಹಿಳೆಯರೊಂದಿಗೆ ಇರುವ ತಿರುಚಿದ ಚಿತ್ರಗಳನ್ನು ಹರಿಯಬಿಡುವವನಿದ್ದ ಎಂಬ ಮಾಹಿತಿ ಸ್ಪಷ್ಟವಾಯಿತು. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಹೇಳಿದ್ದಾರೆ. ಈ ಆಡಿಯೋದ ಸತ್ಯಾಸತ್ಯತೆಯನ್ನು ತನಿಖಾಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.