ಮುಂಬೈ: ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಝಾಕಿರ್ ಹುಸೇನ್ ಶೇಖ್‌ಗೆ ವಿದೇಶದಿಂದ ಸೂಚನೆಗಳು ಬರುತ್ತಿದ್ದವು ಎಂದು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನ ಜೋಗೇಶ್ವರಿ ಉಪನಗರದಿಂದ ಶುಕ್ರವಾರ ಬಂಧಿಸಲಾಗಿರುವ ಝಾಕಿರ್‌ಗೆ ಆಂಥೋನಿ ಅಲಿಯಾಸ್ ಅನ್ವರ್ ಅಲಿಯಾಸ್ ಅನಸ್ ಹೆಸರಿನ ವಿದೇಶಿ ವ್ಯಕ್ತಿಯೊಂದಿಗೆ ಸಂಪರ್ಕವಿತ್ತು. ಮಹಾರಾಷ್ಟ್ರದ ವಿವಿಧೆಡೆ ಭಯೋತ್ಪಾದಕ ದಾಳಿ ನಡೆಸಲು ಆ ವಿದೇಶಿ ವ್ಯಕ್ತಿ ಈತನಿಗೆ ಸೂಚಿಸುತ್ತಿದ್ದ ಎಂದು ನ್ಯಾಯಾಲಯಕ್ಕೆ ಎಟಿಎಸ್ ತಿಳಿಸಿದೆ. ಝಾಕಿರ್‌ನನ್ನು ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಕಳೆದ ವಾರ ಮೂರು ರಾಜ್ಯಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದೆಹಲಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದರು. ಅವರೊಂದಿಗೆ ಝಾಕಿರ್ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಆತನನ್ನೂ ಬಂಧಿಸಲಾಗಿತ್ತು.
ಝಾಕಿರ್ ನೀಡಿದ ಮಾಹಿತಿಯನ್ನಾಧರಿಸಿ ಮುಂದ್ರಾ ಪ್ರದೇಶದಿಂದ ಮತ್ತೂಬ್ಬನನ್ನು ಶನಿವಾರ ಬಂಧಿಸಿದ್ದ ಎಟಿಎಸ್, ಆತ ಚರಂಡಿಯಲ್ಲಿ ಎಸೆದಿದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದೆ. ಮೊಬೈಲ್ ಹಾಳುಗೆಡವಿ ಎಸೆಯಲಾಗಿದ್ದು, ಅದು ಮೂರು ಭಾಗವಾಗಿ ಸಿಕ್ಕಿದೆಯೆಂದು ಹೇಳಲಾಗಿದೆ.