ಕೊಚ್ಚಿ: 'ಮಾನವ ಅಂಗಾಂಗ ಮತ್ತು ಅಂಗಾಂಶ ಕಸಿ ಕಾಯ್ದೆ-1994 ಕೋಮು ಸೌಹಾರ್ದ ಹಾಗೂ ಜಾತ್ಯತೀತತೆಗೆ ಹೊಸ ಮಾರ್ಗ ತೋರಲಿ. ವಿವಿಧ ಧರ್ಮ ಹಾಗೂ ಅಪರಾಧ ಹಿನ್ನೆಲೆಯುಳ್ಳವರು ಕೂಡ ಜಾತಿ, ಮತ ಭೇದ ಎಣಿಸದೇ ಅಗತ್ಯವಿರುವವರಿಗೆ ತಮ್ಮ ಅಂಗಾಂಗಗಳನ್ನು ದಾನ ಮಾಡಲಿ' ಎಂದು ಕೇರಳ ಹೈಕೋರ್ಟ್ ಹೇಳಿದೆ.
'ಮಾನವನ ದೇಹದಲ್ಲಿ ಕ್ರಿಮಿನಲ್ ಮೂತ್ರಕೋಶ ಅಥವಾ ಕ್ರಿಮಿನಲ್ ಯಕೃತ್ತು ಇಲ್ಲವೇ ಕ್ರಿಮಿನಲ್ ಹೃದಯ ಎಂಬುದಿಲ್ಲ. ಅಪರಾಧ ಹಿನ್ನೆಲೆ ಇರದ ಹಾಗೂ ಅಪರಾಧಗಳನ್ನು ಎಸಗಿರುವ ವ್ಯಕ್ತಿಯ ಅಂಗಾಂಗದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ' ಎಂದೂ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಪಿ.ವಿ.ಕುನ್ಹಿಕೃಷ್ಣನ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂಗಾಂಗ ದಾನಕ್ಕೆ ಅನುಮತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಎರ್ನಾಕುಲಂ ಜಿಲ್ಲಾ ಮಟ್ಟದ ದೃಢೀಕರಣ ಸಮಿತಿ, ದಾನಿಗೆ ಅಪರಾಧ ಹಿನ್ನೆಲೆ ಇತ್ತು ಎಂಬ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಸಮಿತಿಯ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸದ ನ್ಯಾಯಮೂರ್ತಿ ಕುನ್ಹಿಕೃಷ್ಣನ್, 'ಅಂಗಾಂಗ ದಾನಕ್ಕೆ ಅನುಮತಿ ನೀಡಲು ದಾನಿಯ ಅಪರಾಧ ಹಿನ್ನೆಲೆಯೇ ಮಾನದಂಡವಾಗಬಾರದು' ಎಂದು ಹೇಳಿದರು.
'ದಾನಿ ಒಬ್ಬ ಹಿಂದೂ, ಕ್ರೈಸ್ತ, ಮುಸ್ಲಿಂ, ಸಿಖ್ ಅಥವಾ ಕೆಳಜಾತಿಗೆ ಸೇರಿದ ವ್ಯಕ್ತಿ ಎಂಬ ಕಾರಣ ನೀಡಿ ಸಮಿತಿ ಇಂಥ ಅರ್ಜಿಗಳನ್ನು ತಿರಸ್ಕರಿಸುವುದಿಲ್ಲ ಎಂಬ ವಿಶ್ವಾಸ ಇದೆ' ಎಂದೂ ಹೇಳಿದರು.