ವಾಷಿಂಗ್ಟನ್ : ನಿರೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆ ವೇದಿಕೆಯಲ್ಲಿ ಅಫ್ಘಾನಿಸ್ತಾನದ ಪ್ರಸಕ್ತ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ್ದಾರೆ.
ಅಫ್ಘಾನಿಸ್ತಾನದ ಭೂಮಿಯನ್ನು ಭಯೋತ್ಪಾದನೆಗೆ ಬಳಸುವುದನ್ನು ಖಂಡಿಸಿರುವ ಮೋದಿ ಬೇರೆ ದೇಶಗಳು ತಮ್ಮ ರಾಜಕೀಯ ಷಡ್ಯಂತ್ರಗಳಿಗೆ ಅಫ್ಘಾನಿಸ್ತಾನವನ್ನು ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ಹಾಗೂ ಚೀನಾದ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಅಫ್ಘಾನ್ ನೆಲ ದುರುದ್ದೇಶಕ್ಕೆ ಬಳಕೆಯಾಗುತ್ತಿರುವುದನ್ನು ಉಲ್ಲೇಖಿಸಿದ್ದಾರೆ.
ಈ ಹಿಂದೆ ಬ್ರಿಕ್ಸ್ ಶೃಂಗಸಭೆಯಲ್ಲೂ ಅಫ್ಘಾನಿಸ್ತಾನ ವಿಚಾರವನ್ನು ಮೋದಿ ಪ್ರಸ್ತಾಪಿಸಿದ್ರು, ಆದರೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಭಾಷಣದಲ್ಲಿ ಇನ್ನಷ್ಟು ಪ್ರಖರವಾಗಿ ಪ್ರಸ್ತಾಪಿಸಿರುವ ಮೋದಿ ಅಫ್ಘಾನಿಸ್ತಾನ ನೆಲವು ಭಯೋತ್ಪಾದನೆಗೆ ಬಳಕೆಯಾಗದಂತೆ ಜಾಗತಿಕ ಸಮುದಾಯಗಳು ಎಚ್ಚರಿಕೆ ವಹಿಸಬೇಕಿದೆ.
ಹಾಗೆಯೇ ಅಫ್ಘಾನಿಸ್ತಾನದ ನೆಲವು ಪ್ರಾಕ್ಸಿ ಯುದ್ಧಗಳಿಗೆ ತಾಣವಾಗಕೂಡದು, ಇನ್ನೊಂದೆಡೆ ಬೇರೆ ದೇಶಗಳು ತನ್ನ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲು ಅಫ್ಘಾನಿಸ್ತಾನ ಟೂಲ್‌ಕಿಟ್ ರೀತಿಯಲ್ಲಿ ಬಳಕೆಯಾಗಬಾರದು.
ಈ ನಿಟ್ಟಿನಲ್ಲಿ ವಿಶ್ವಸಮುದಾಯ ಎಚ್ಚರಿಕೆವಹಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ. ಯಾವ ದೇಶವೂ ಬಯೋತ್ಪಾದನೆಯನ್ನು ರಾಜಕೀಯ ದಾಳದ ರೀತಿ ಬಳಸುತ್ತಿದೆಯೋ ಆ ದೇಶಕ್ಕೆ ಅದೇ ಭಯೋತ್ಪಾದನೆ, ಅಪಾಯವಾಗಿ ಪರಿಣಮಿಸಲಿದೆ ಎನ್ನುವುದನ್ನು ಮರೆಯಬಾರದು. ಹೀಗಾಗಿ ಅಫ್ಘಾನಿಸ್ತಾನದ ನೆಲದಲ್ಲಿ ಯಾವುದೇ ಭಯೋತ್ಪಾದನೆ ಚಟುವಟಿಕೆಗಳು ನಡೆಯದಂತೆ ಹಾಗೂ ಭಯೋತ್ಪಾದನಾ ದಾಳಿಗಳು ನಡೆಯದಂತೆ ಎಚ್ಚರಿಕೆವಹಿಸಬೇಕಿದೆ ಎಂದು ಮೋದಿ ಹೇಳಿದರು.
ವಿಶ್ವಸಂಸ್ಥೆ ವಿರುದ್ಧ ಗರಂ: ವಿಶ್ವಸಂಸ್ಥೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವವಾಗುತ್ತಿದೆ. ಹವಾಮಾನ ವೈಪರಿತ್ಯ ಕೋವಿಡ್‌ನ ಮೂಲ ಪತ್ತೆ ಹಚ್ಚುವ ವಿಚಾರದಲ್ಲಿಯೂ ಇದು ಜಗತ್ತಿನ ಎದುರು ಬಟಾಬಯಲಾಗಿದೆ.
ಆದರೆ ಈಗ ಹೊಸದಾಗಿ ಅಫ್ಘಾನಿಸ್ತಾನ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ವಿಶ್ವಸಂಸ್ಥೆ ನಿರೀಕ್ಷೆಯಂತೆ ವರ್ತಿಸಿಲ್ಲ. ವಿಶ್ವಸಂಸ್ಥೆಯು ಜಾಗತಿಕ ಮೌಲ್ಯ ನಿಯಮ, ಹಾಗೂ ಸಂದೇಶಗಳನ್ನು ಸಮೃಕ್ಷಿಸಲು ಮುಂದಡಿ ಇಡಲೇಬೇಕಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಹಾಗೆಯೇ ಅಫ್ಘಾನಿಸ್ತಾನದಲ್ಲಿನ ಅಲ್ಪಸಂಖ್ಯಾತರ ಬಗ್ಗೆಯೂ ಧ್ವನಿ ಎತ್ತಿರುವ ಪ್ರಧಾನಿ, ದೇಶದ ಅಲ್ಪಸಂಖ್ಯಾತರ ಹಿತರಕ್ಷಣೆಯನ್ನು ಕಾಪಾಡುವುದು ವಿಶ್ವಸಂಸ್ಥೆ ಹಾಗೂ ಜಾಗತಿಕ ಸಮುದಾಯದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಾಗಿದೆ ಎಂದು ಹೇಳಿದ್ದಾರೆ.